ಸೋಮವಾರಪೇಟೆ, ಜ. 25: ಸರ್ಕಾರಿ ಜಮೀನು ಅತಿಕ್ರಮಣದ ಬಗ್ಗೆ ದೂರು ನೀಡಲು ತೆರಳಿದ ವಕೀಲರ ಮೇಲೆ ಮೈಸೂರಿನ ನಜರ್ಬಾದ್ನ ಠಾಣಾಧಿಕಾರಿ ದೌರ್ಜನ್ಯ ಎಸಗಿದ್ದರೂ ಇದುವರೆಗೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಸೋಮವಾರಪೇಟೆ ನ್ಯಾಯಾಲಯದ ವಕೀಲರುಗಳು ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.
ಸರ್ಕಾರಿ ಜಮೀನು ಅತಿಕ್ರಮಣ ಬಗ್ಗೆ ಮೈಸೂರಿನ ವಕೀಲ ಗೋಕುಲ್ ಗೋವರ್ಧನ್ ಅವರು ನಜರ್ಬಾದ್ ಠಾಣೆಗೆ ತೆರಳಿದ ಸಂದರ್ಭ ಅಲ್ಲಿನ ಠಾಣಾಧಿಕಾರಿ ಎಲ್ಲಾಲಿಂಗ ಅವರು ದೌರ್ಜನ್ಯ ನಡೆಸಿದ್ದಾರೆ. ಜತೆಗೆ ಸಿ.ಸಿ. ಕ್ಯಾಮೆರಾದ ವೀಡಿಯೋವನ್ನೂ ನಾಶಗೊಳಿಸಿದ್ದಾರೆ. ಈ ಬಗ್ಗೆ ದೂರು ನೀಡಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಎಸ್.ಐ. ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದರೂ ಸೇವೆಯಿಂದ ಅಮಾನತು ಮಾಡಿಲ್ಲ ಎಂದು ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಠಾಣಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಲಾಪ ಬಹಿಷ್ಕಾರ ಮಾಡಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವದು ಎಂದು ವಿಠಲ್ ಎಚ್ಚರಿಸಿದರು.
ಈ ಸಂದರ್ಭ ವಕೀಲರ ಸಂಘದ ಕಾರ್ಯದರ್ಶಿ ಹೇಮಚಂದ್ರ, ಹಿರಿಯ ವಕೀಲರುಗಳಾದ ಬೋಪಯ್ಯ, ಡಿ.ಕೆ. ತಿಮ್ಮಯ್ಯ, ಬಿ.ಈ. ಜಯೇಂದ್ರ, ಪಿ.ಎಸ್. ಮಂಜುನಾಥ್, ಮನೋಹರ್ ಸೇರಿದಂತೆ ಇತರರು ಭಾಗವಹಿಸಿದ್ದರು.
ವೀರಾಪೇಟೆಯಲ್ಲಿಯೂ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಕಲಾಪ ಬಹಿಷ್ಕರಿಸಲಾಯಿತು. ಪ್ರತಿಭಟನೆಯಲ್ಲಿ ವಕೀಲರ ಸಂಘದ ವಿ.ಜೆ. ರಾಖೇಶ್, ಅನ್ವರ್ ಅಹಮ್ಮದ್, ದ್ರುವ ಕುಮಾರ್, ಪ್ರದ್ಯುಮ್ನ ಮತ್ತಿತರರಿದ್ದರು.