ಆಲೂರು-ಸಿದ್ದಾಪುರ, ಜ. 23: ಇಂದು ಸರ್ಕಾರಿ ಶಾಲೆಗಳಲ್ಲೂ ಸಹ ಖಾಸಗಿ ಶಾಲೆಗಳಿಗಿಂತ ಉತ್ತಮ ವ್ಯವಸ್ಥೆ ಇದ್ದರೂ ಅನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳತ್ತ ಕಳುಹಿಸುತ್ತಿರುವದು ವಿಷಾದನೀಯ ಎಂದು ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅಭಿಪ್ರಾಯಪಟ್ಟರು.

ಶನಿವಾರಸಂತೆ ಕ್ಲಸ್ಟರ್ ವ್ಯಾಪ್ತಿಯ ತ್ಯಾಗರಾಜ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆ ಯಡಿಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ, ಗಣಿತ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಇಂದು ಉತ್ತಮ ಸೌಲಭ್ಯಗಳು ದೊರಕುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೋಳ್ಳಬೇಕಾಗಿದೆ.

ಮಕ್ಕಳು ಪ್ರಾರಂಭದ ಹಂತದಲ್ಲೆ ಶಿಸ್ತು ಸಮಯ ಪಾಲನೆಯನ್ನು ಮೈಗೂಡಿಸಿ ಕೊಂಡಾಗ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವಾಗುತ್ತದೆ ಎಂದರು. ದುಂಡಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿ, ಮಕ್ಕಳು ಚಟುವಟಿಕೆಯಿಂದ ಕೂಡಿದ್ದ ಹೊಸ ಅವಿಷ್ಕಾರಗಳನ್ನು ಮಾಡುವ ದೋರಣೆ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅದ್ಯಕ್ಷ ಮುಬಾರಕ್ ಪಾಷಾ ವಹಿಸಿದ್ದರು. ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯರಾದ ಉಷ ಜಯೇಶ್, ಹೇಮಾವತಿ, ಸಂಪನ್ಮೂಲ ವ್ಯಕ್ತಿ ನಿರ್ಮಲ, ಮೋಹನ್ ಹಾಗೂ ಶನಿವಾರಸಂತೆ ಕ್ಲಸ್ಟರ್ರ್‍ನ ಎಲ್ಲಾ ಶಾಲೆಯ ಮಕ್ಕಳು ಶಿಕ್ಷಕರು ಪಾಲ್ಗೊಂಡಿದ್ದರು.