ಚಿತ್ರ ವರದಿ ವಾಸುಸಿದ್ದಾಪುರ, ಜ. 23: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬೆಳೆಗಾರರು ಹಾಗೂ ಕಾರ್ಮಿಕರು ಆಕ್ರೋಶಗೊಂಡು ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುವ ಮೂಲಕ ರಸ್ತೆ ತಡೆಯನ್ನು ನಡೆಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಕಾಫಿ ಬೆಳೆಗಾರರಾದ ಕೆ.ಪಿ. ಮೋಹನ್ ದಾಸ್ ಅವರು ನಿನ್ನೆ ದಿನ ಕಾಡಾನೆ ಧಾಳಿಯಿಂದ ಸಾವನ್ನಪ್ಪಿ ದ್ದರು. ಈ ಹಿನ್ನೆಲೆಯಲ್ಲಿ ಬೆಳೆಗಾರರು ಹಾಗೂ ಕಾರ್ಮಿಕರು ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮೋಹನ್ ದಾಸ್‍ರವರು

(ಮೊದಲ ಪುಟದಿಂದ) ಮೃತಪಟ್ಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ, ಸಿದ್ದಾಪುರ ವ್ಯಾಪ್ತಿಯ ಕಾಫಿ ಬೆಳೆಗಾರರು ಹಾಗೂ ಕಾರ್ಮಿಕ ಸಂಘಟನೆಗಳು, ಸಾರ್ವಜನಿಕರು, ಒಗ್ಗೂಡಿ ಸಿದ್ದಾಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿದರು. ನೂರಾರು ಮಂದಿ ಪ್ರತಿಭಟನೆಕಾರರು ಸಿದ್ದಾಪುರದ ಮೈಸೂರು ರಸ್ತೆಯ ತಿರುವಿನಲ್ಲಿ ಸೇರಿ 10 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು. ನಂತರ ಸಿದ್ದಾಪುರ ಬಸ್ಸು ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಕಾರರು ಸಭೆ ನಡೆಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಣ್ಣ ಬೆಳೆಗಾರರ ಸಂಘದ ಉಪಾಧ್ಯಕ್ಷ ಚೇರಂಡ ನಂದಾಸುಬ್ಬಯ್ಯ ಮಾತನಾಡಿ ಕಳೆದ 2 ದಶಕಗಳಿಂದ ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಕಾರ್ಮಿಕರು ಹಾಗೂ ಬೆಳೆಗಾರರು ಬೇಸತ್ತಿದ್ದು, ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿದಿದ್ದರೂ ಕೂಡ ಯಾವದೇ ಶಾಶ್ವತ ಯೋಜನೆಯನ್ನು ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಾರರು ಹಾಗೂ ಕಾರ್ಮಿಕರು ಸಂಕಷ್ಟದ ಪರಿಸ್ಥಿತಿ ಅನುಭವಿಸುವಂತಾಗಿದೆ. ಮಾಲ್ದಾರೆ, ಇಂಜಿಲಗೆರೆ, ಕರಡಿಗೋಡು ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡುಬಿಟ್ಟಿವೆ. ಜಿಲ್ಲೆಯಲ್ಲಿ ಪರಿಸರವಾದಿಗಳು ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ಕಂಟಕ ವಾಗಿದ್ದಾರೆ ಎಂದು ಟೀಕಿಸಿದರು.

ಮಾಜಿ ಶಾಸಕ ಅರುಣ್ ಮಾಚಯ್ಯ ಮಾತನಾಡಿ ಜಿಲ್ಲೆಯಲ್ಲಿ ಪದೇಪದೇ ಕಾಡಾನೆಗಳ ಹಾವಳಿಯಿಂದಾಗಿ ಮಾನವನ ಹತ್ಯೆ ಹಾಗೂ ಬೆಳೆ ನಷ್ಟವಾಗುತ್ತಿದ್ದರೂ ಕೂಡ ಅರಣ್ಯ ಇಲಾಖಾಧಿಕಾರಿ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಅರಣ್ಯ ಇಲಾಖಾಧಿಕಾರಿಗಳು ಸರ್ಕಾರಕ್ಕೆ ಸಮರ್ಪಕವಾದ ವರದಿಯನ್ನು ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಡಾನೆಗಳು ನಾಡಿಗೆ ಬರುತ್ತಿವೆ. ಅರಣ್ಯ ಇಲಾಖಾಧಿಕಾರಿಗಳ ಈ ನಿಲುವಿಗೆ ಪರಿಸರವಾದಿಗಳು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದರು. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಹಿಡಿದು ಹೊರ ದೇಶಕ್ಕೆ ರವಾನಿಸಬೇಕೆಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ ರೈತರು ಹಾಗೂ ಕಾರ್ಮಿಕರು ಕಾಡಾನೆಗಳ ಹಾವಳಿಯ ವಿರುದ್ಧ ಸಂಘಟಿತವಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸಹಕಾರ ನೀಡದ ಜನಪ್ರತಿನಿಧಿಗಳು ಹಾಗೂ ಅರಣ್ಯ ಅಧಿಕಾರಿಗಳು ಜಿಲ್ಲೆಯನ್ನು ಬಿಟ್ಟು ತೊಲಗಲಿ ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಹೇಮಚಂದ್ರ ಮಾತನಾಡಿ ಕಳೆದ ಕೆಲವು ವರ್ಷಗಳ ಹಿಂದೆ ಸಿದ್ದಾಪುರ ಸಮೀಪದ ಮಾರ್ಗೊಲ್ಲಿ ಕಾಫಿ ತೋಟವೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆಯೊಂದು ಮೃತಪಟ್ಟ ಸಂದರ್ಭದಲ್ಲಿ ಅರಣ್ಯ ಇಲಾಖಾಧಿಕಾರಿಗಳು ಕೆ.ಇ.ಬಿ. ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಕಾಫಿ ಬೆಳೆಗಾರರೊಬ್ಬರನ್ನು ಕಾಫಿ ತೋಟದಲ್ಲಿ ಕಾಡಾನೆ ಹತ್ಯೆ ಮಾಡಿದ್ದು ಈ ಬಗ್ಗೆ ಪೊಲೀಸ್ ಠಾಣೆಗೆ ಅರಣ್ಯ ಇಲಾಖಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಪುಕಾರು ನೀಡಿದ್ದರೂ ಕೂಡ ಪೊಲೀಸ್ ಇಲಾಖೆ ಪ್ರಥಮ ವರ್ತಮಾನ ವರದಿ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಮತ್ತೋರ್ವ ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ ಬೆಳೆಗಾರರು ಹಾಗೂ ಕಾರ್ಮಿಕರು ಭೇದಭಾವ ಬಿಟ್ಟು ಸಂಘಟಿತರಾಗಿ ಕಾಡಾನೆ ಹಾವಳಿಯ ವಿರುದ್ಧ ಹೋರಾಟ ಮಾಡುವ ಮೂಲಕ ಶಾಶ್ವತ ಯೋಜನೆಯನ್ನು ಸರ್ಕಾರ ರೂಪಿಸಲು ಒತ್ತಾಯಿಸಬೇಕೆಂದು ಕರೆ ನೀಡಿದರು.

ನಂತರ ಪ್ರತಿಭಟನಕಾರರು ಸ್ಥಳೀಯ ಠಾಣೆಗೆ ಜಮಾಯಿಸಿ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಅಲ್ಲದೇ ಪೊಲೀಸ್ ಠಾಣೆ ಎದುರು ಧರಣಿ ಕುಳಿತು ಪ್ರತಿಭಟಿಸಿದರು.

ಈ ಸಂದರ್ಭ ಕೊಡಗು ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಎಂ. ಕಾವೇರಪ್ಪ, ಕಾರ್ಯದರ್ಶಿ ಕೆ.ಪಿ. ಗಣಪತಿ, ಕಾರ್ಮಿಕ ಮುಖಂಡ ಎನ್.ಡಿ. ಕುಟ್ಟಪ್ಪ, ರೈತ ಸಂಘದ ಸಭೀತಭೀಮಯ್ಯ, ಪತ್ರಕರ್ತ ರೆಜಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಎ.ಎಸ್. ಮುಸ್ತಫ, ಬೆಳೆಗಾರರಾದ ನಡಿಕೇರಿಯಂಡ ಮಾಚಯ್ಯ, ಎನ್.ಡಿ. ಅಶೋಕ್, ಕುಶೀಭೀಮಯ್ಯ, ಮಿಟ್ಟು ನಂಜಪ್ಪ, ಪಿ.ವಿ. ಜಾನ್ಸನ್ ಇತರರು ಹಾಜರಿದ್ದರು.ಪ್ರತಿಭಟನಾ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾಡಾನೆ ಧಾಳಿಗೆ ಸಿಲುಕಿ ಬೆಳೆಗಾರ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಕಾರಣ ಎಂದು ಮೃತ ಮೋಹನ್‍ದಾಸ್ ಅವರ ಸಂಬಂಧಿ ಕುಕ್ಕುನೂರು ಸೋಮಣ್ಣ, ಕಾರ್ಮಿಕ ಮುಖಂಡ ಮಹದೇವ, ಕೊಲ್ಲಿರ ಧರ್ಮಜ, ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಸೇರಿದಂತೆ ಇತರರು ನೀಡಿರುವ ದೂರಿನನ್ವಯ ಅರಣ್ಯ ಇಲಾಖೆಯ ಸಿ.ಸಿ.ಎಫ್, ಡಿ.ಎಫ್.ಓ, ಆರ್.ಎಫ್.ಓ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೊಡಗು ಜಿಲ್ಲಾ ರೈತರ ಹಾಗೂ ಕಾರ್ಮಿಕರ ಅರಣ್ಯ ಹೋರಾಟ ಸಮಿತಿ, ರೈತ ಸಂಘ ಸೇರಿದಂತೆ ಹಲವರು ಸೋಮವಾರ ರಾತ್ರಿಯೇ ಪ್ರಕರಣ ದಾಖಲಿಸಬೇಕೆಂದು ಪೊಲೀಸ್ ಠಾಣೆಗೆ ಜಮಾಯಿಸಿ, ಠಾಣಾಧಿಕಾರಿಗೆ ಒತ್ತಡ ಹಾಕಿದ್ದರು. ಇಂದು ಈ ಬಗ್ಗೆ ನ್ಯಾಯಾಲಯದ ಅನುಮತಿಯನ್ನು ಪಡೆದು ಬಳಿಕ ಮೊಕದ್ದಮೆ ದಾಖಲಾಗಿದೆ.

ಇತ್ತೀಚೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಸಂದರ್ಭ ಕಾಡಾನೆಯ ಸಾವಿಗೆ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸೆಸ್ಕ್ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿದ್ದರು. ಇದೀಗ ಕಾಡಾನೆ ಧಾಳಿಗೆ ವ್ಯಕ್ತಿ ಬಲಿಯಾಗಲು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ ಅರಣ್ಯ ಇಲಾಖೆಯ ವಿರುದ್ಧ ಪ್ರಕರಣ ದಾಖಲಾಗಿದೆ.

ಮೊದಲ ಜಯ

ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಲು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿರುವದು ಮೊದಲ ಜಯ ಎಂದು ಹೋರಾಟ ಸಮಿತಿಯ ಕಾನೂನು ಸಲಹೆಗಾರÀ ಹೇಮಚಂದ್ರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡಿಗೋಡು ಗ್ರಾಮದ ಬೆಳೆಗಾರ ಮೋಹನ್‍ದಾಸ್ ಸಾವಿಗೆ ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ತಾ.18 ರಂದು ಮಡಿಕೇರಿಯ ಅರಣ್ಯಭವನದಲ್ಲಿ ನಡೆದ ಸಭೆಯಲ್ಲಿ ತಾ.19 ರಿಂದ ಕಾಡಾನೆ ಕಾರ್ಯಚರಣೆ ಮಾಡುವದಾಗಿ ಸಿ.ಸಿ.ಎಫ್ ತಿಳಿಸಿದ್ದರು. ಈ ಹಿಂದೆಯೇ ಕಾಡಾನೆಯನ್ನು ಕಾಡಿಗಟ್ಟಬೇಕೆಂದು ಮನವಿ ನೀಡಿದ್ದರೂ ನಿರ್ಲಕ್ಷ್ಯ ವಹಿಸಿದ್ದು, ವ್ಯಕ್ತಿಯ ಸಾವಿಗೆ ಕಾರಣವಾಗಿದೆ. ಇದೀಗ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿರುವದು ಹೋರಾಟ ಸಮಿತಿಗೆ ಸಿಕ್ಕ ಮೊದಲ ಜಯ ಎಂದರಲ್ಲದೆ, ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳನ್ನು ಮುಂದಿನ 48 ಗಂಟೆಗಳಲ್ಲಿ ಬಂದಿಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.

ಸಮಿತಿಯ ಪ್ರಮುಖ ಪಿ.ಆರ್ ಭರತ್ ಮಾತನಾಡಿ, ಮೋಹನ್‍ದಾಸ್ ಸಾವಿನ ಘಟನೆಗೆ ಸಂಬಂಧಿಸಿದಂತೆ ಕಾರ್ಮಿಕರು ಹಾಗೂ ಬೆಳೆಗಾರರು ಒಗ್ಗೂಡಿ ರಸ್ತೆ ತಡೆ, ಪ್ರತಿಭಟನಾ ಮೆರವಣಿಗೆ ಹಾಗೂ ಬಂದ್ ನಡೆಸಿದ್ದು, ಕಾರ್ಮಿಕರು ಹಾಗೂ ಬೆಳೆಗಾರರು ಒಗ್ಗಟ್ಟಿನಿಂದ ನಿರಂತರವಾಗಿ ಜಿಲ್ಲಾ ಮಟ್ಟದ ಹೋರಾಟ ನಡೆಸಲಾಗುವದು ಎಂದರು.

ರೈತ ಸಂಘದ ಜಿಲ್ಲಾ ಸಂಚಾಲಕ ಚಿಮ್ಮಂಗಡ ಗಣೇಶ್ ಮಾತನಾಡಿ, ಸೋಮವಾರ ರಾತ್ರಿ ಮೊಕದ್ದಮೆ ದಾಖಲಿಸಲು ಠಾಣೆಗೆ ತೆರಳಿದ್ದರೂ, ಠಾಣಾಧಿಕಾರಿ ಮೊಕದ್ದಮೆ ದಾಖಲಿಸಲು ಹಿಂದೇಟು ಹಾಕಿದ್ದು, ಹೋರಾಟದ ಫಲವಾಗಿ ಇದೀಗ ಮೊಕದ್ದಮೆ ದಾಖಲಾಗಿದೆ. ಆರೋಪಿ ಸ್ಥಾನದಲ್ಲಿರುವ ಅಧಿಕಾರಿಗಳನ್ನು 48 ಗಂಟೆಗಳಲ್ಲಿ ಬಂಧಿಸದಿದ್ದಲ್ಲಿ ಜಿಲ್ಲೆಯ ಹೆದ್ದಾರಿ ತಡೆ ನಡೆಸಿ, ಗಡಿ ಬಂದ್ ಮಾಡಿ ಹೋರಾಟ ಮಾಡಲಾಗುವದು ಎಂದರು.

ಮಾಜಿ ಜಿ.ಪಂ ಸದಸ್ಯ ಹಾಗೂ ಪುಕಾರುದಾರ ಕೊಲ್ಲಿರ ಧರ್ಮಜ ಮಾತನಾಡಿ, ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಹಲವಾರು ಹೋರಾಟ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಈಗಾಗಲೇ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಸ್ಥಳಾಂತರಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿದರು.

ಕಾರ್ಮಿಕ ಮುಖಂಡರಾದ ಮಹದೇವ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದರೂ ಅರಣ್ಯ ಸಚಿವರು ಜಿಲ್ಲೆಗೆ ಭೇಟಿ ನೀಡಲಿಲ್ಲ. ಅರಣ್ಯ ಸಚಿವರು ಕೂಡಲೇ ಜಿಲ್ಲೆಗೆ ಭೇಟಿ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಕಾರ್ಮಿಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ, ಮಡಿಕೇರಿಯಲ್ಲಿ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪ್ರಮುಖರಾದ ದೇವಣಿರ ಸುಜಯ್, ಕಾರ್ಮಿಕ ಮುಖಂಡ ಹೆಚ್.ಬಿ ರಮೇಶ್, ರೈತ ಸಂಘದ ಚೊನಿರ ಸತ್ಯ, ಸುಜಯ್ ಬೋಪಯ್ಯ ಸೇರಿದಂತೆ ಇನ್ನಿತರರು ಇದ್ದರು.

ಸ್ವಾಗತಾರ್ಹ

ಕಾಡಾನೆ ಧಾಳಿಗೆ ಸಿಲುಕಿ ಬೆಳೆಗಾರ ಸಾವಿಗಿಡಾದ ಪ್ರಕರಣದಲ್ಲಿ ಬೆಳೆಗಾರರು, ಕಾರ್ಮಿಕ ಮುಖಂಡರು ಹಾಗೂ ಸಂಘ ಸಂಸ್ಥೆಗಳು ನೀಡಿದ ದೂರಿನನ್ವಯ ಅರಣ್ಯ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಾಗಿರು ವದು ಸ್ವಾಗತಾರ್ಹ ಎಂದು ಜಿ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಹೇಳಿದ್ದಾರೆ.

ಜಿಲ್ಲಾದ್ಯಂತ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಧಾಳಿಗೆ ಜಿಲ್ಲೆಯಲ್ಲಿ ಹಲವಾರು ಮಂದಿ ಕಾರ್ಮಿಕರು ಹಾಗೂ ಬೆಳೆಗಾರರು ಸಾವನ್ನಪ್ಪಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸುತ್ತಿರುವ ಬಗ್ಗೆ ಮೊಕದ್ದಮೆ ದಾಖಲಾಗಿದೆ. ಅದರೊಂದಿಗೆ ಅರಣ್ಯ ಸಚಿವರ ವಿರುದ್ಧವೂ ಮೊಕದ್ದಮೆ ದಾಖಲಿಸ ಬೇಕೆಂದು ಅವರು ಅಭಿಪ್ರಾಯಪಟ್ಟರು.