ಕುಶಾಲನಗರ, ಜ. 23: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಸಮಿತಿ ವತಿಯಿಂದ ಕಾಲೇಜು ಆವರಣದಲ್ಲಿ ಜಿಲ್ಲಾಮಟ್ಟದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿ ನಡೆಯಿತು. ಕಾಲೇಜು ಪ್ರಾಂಶುಪಾಲ ಪ್ರೊ. ಪಿ.ಎಂ. ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾವಳಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ಜಿಲ್ಲೆಯ ವಿವಿಧ ಕಾಲೇಜುಗಳ 12 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಅನುಗ್ರಹ ಕಾಲೇಜು ತಂಡಗಳ ಮಧ್ಯೆ ಪ್ರದರ್ಶನ ಪಂದ್ಯ ನಡೆಯಿತು. ಆತಿಥೇಯ ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎ ಮತ್ತು ಬಿ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಗಳಿಸಿತು. ಸೋಮವಾರಪೇಟೆಯ ಸಂತ ಜೋಸೆಫರ ಕಾಲೇಜು ತಂಡ ತೃತೀಯ ಸ್ಥಾನ ಗಳಿಸಿತು. ಕುಶಾಲನಗರ ತಂಡದ ಸಂದೀಪ್ ಸರಣಿ ಪುರುಷೋತ್ತಮ ಬಹುಮಾನ ಪಡೆದುಕೊಂಡರು.

ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಕುಶಾಲನಗರ ಪ.ಪಂ. ಸದಸ್ಯ ಎಂ.ಎಂ. ಚರಣ್, ಬಸವೇಶ್ವರ ಬಡಾವಣೆ ನಾಗರಿಕ ಸಮಿತಿ ಅಧ್ಯಕ್ಷ ಸುದೀಶ್, ದೈಹಿಕ ಶಿಕ್ಷಣ ನಿರ್ದೇಶಕಿ ಐ.ಕೆ. ಪೂವಮ್ಮ, ಉಪನ್ಯಾಸಕರಾದ ಪ್ರೊ. ಹೆಚ್.ಬಿ. ಲಿಂಗಮೂರ್ತಿ, ಪಿ.ಟಿ. ಕಾಶಿಕುಮಾರ್, ವಸಂತಕುಮಾರಿ, ಅಧೀಕ್ಷಕಿ ಮೀನಾಕ್ಷಿ ವಿದ್ಯಾರ್ಥಿ ನಾಯಕರಾದ ಲೋಹಿತ್, ಯೋಶಿತ ಮತ್ತಿತರರು ಇದ್ದರು.