ಕುಶಾಲನಗರ, ಜ. 23: ನಾವು ಹುಟ್ಟು ಬೆಳೆದ ಊರು, ನಮ್ಮನ್ನು ಸಾಕಿ ಸಲಹಿದವರಿಂದ ದೂರವಾಗುತ್ತೇವೆ ಎಂಬ ವಿಚಾರ ಅರಿಯುತ್ತಿದ್ದಂತೆ ಸಹಿಸಿಕೊಳ್ಳಲಾರದಂತಹ ವೇದನೆ ನಮ್ಮೊಳಗೆ ಮೂಡುತ್ತದೆ. ಯಾರಿಗೂ ಯಾರನ್ನೂ ಕಳುಹಿಸಲೂ ಮನಸ್ಸಿರುವದಿಲ್ಲ. ಆದರೆ, ನಾವೇ ಸಾಕಿ - ಸಲಹಿದ ಪ್ರಾಣಿ - ಪಕ್ಷಿಗಳನ್ನು ಮನಸ್ಸಿಲ್ಲದಿದ್ದರೂ ದೂರ ಮಾಡುತ್ತೇವೆ, ಬೇರೆ ಕಡೆಗೆ ಕಳುಹಿಸಿಕೊಡುತ್ತೇವೆ. ಅವುಗಳ ಮನಸ್ಥಿತಿ, ಅವುಗಳ ಭಾವನೆ, ಅವುಗಳ ಒಡನಾಟ, ಹುಟ್ಟಿದ ಮಣ್ಣಿನೊಂದಿಗಿನ ನಂಟು, ಇವ್ಯಾವುದರ ಬಗ್ಗೆ ನಾವುಗಳೂ ಆ ಕ್ಷಣದಲ್ಲಿ ಅರಿಯದಾಗುತ್ತೇವೆ.ಕೆಲವೊಂದು ಪ್ರಾಣಿ - ಪಕ್ಷಿಗಳಿಗೆ ಹುಟ್ಟಿ, ಬೆಳೆದ ಜಾಗ, ಸಾಕಿ ಸಲಹಿದವರನ್ನು ಬಿಟ್ಟು ತೆರಳಲು ತಯಾರಿರುವದಿಲ್ಲ. ಬಾಯಿ ಬಾರದೆ ಮೂಕವೇದನೆಯೊಂದಿಗೆ ಪರಿತಪಿಸುತ್ತಾ ಕಣ್ಣೀರಿಡುತ್ತಾ, ತಮ್ಮ ನೋವನ್ನು ವ್ಯಕ್ತಪಡಿಸುತ್ತವೆ. ಇಂತಹ ಒಂದು ಮನ ಮಿಡಿಯುವ ದೃಶ್ಯ ಆನೆ ಶಿಬಿರ ದುಬಾರೆಯಲ್ಲಿ ಕಂಡು ಬಂದಿತು. ದುಬಾರೆಯಿಂದ ಛತ್ತೀಸ್‍ಘಡಕ್ಕೆ 3 ಆನೆಗಳನ್ನು ಒಯ್ಯಲು ನಿರ್ಧರಿಸಿದ್ದು, ಅಜ್ಜಯ್ಯ, ತೀರ್ಥರಾಮ, ಪರಶುರಾಮ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಯತ್ನ ಆಗುತ್ತಿದ್ದ ಸಂದರ್ಭ ಇದೇ ಕಾಡಿನಲ್ಲಿ ಹುಟ್ಟಿ, ಸೆರೆಸಿಕ್ಕು, ಕಳೆದ 10 ವರ್ಷಗಳಿಂದ ಇಲ್ಲಿನ ಮಾವುತರ ಪೋಷಣೆಯಲ್ಲಿದ್ದ ‘ಅಜ್ಜಯ್ಯ’ ಮಾತ್ರ ಲಾರಿಯನ್ನೇರದೆ ಅಲ್ಲಿಂದ ತಪ್ಪಿಸಿಕೊಂಡು, ಓಡಿ ಕಾಡಿನಲ್ಲಿ ಮರೆಯಾಗಿದೆ.
ದುಬಾರೆ ಶಿಬಿರದಲ್ಲಿ ಅಜ್ಜಯ್ಯ, ತೀರ್ಥರಾಮ, ಪರಶುರಾಮ ಆನೆಗಳನ್ನು ಸೋಮವಾರ ರಾತ್ರಿ ಲಾರಿಗಳಲ್ಲಿ ಒಯ್ಯಲು ಸಿದ್ದತೆ ನಡೆಸುತ್ತಿದ್ದಾಗ ಅಜ್ಜಯ್ಯ ಲಾರಿ ಏರದೆ ಕಾಲಿನ ಸರಪಳಿಗಳನ್ನು ತುಂಡರಿಸಿ ಕಾಲ್ಕಿತ್ತಿದ್ದು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ.
ಶಿಬಿರದ ಮಾವುತರು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳ ಶೀಥಲ ಸಮರದ ನಡುವೆ ಈ ಆನೆ ಪರಾರಿ ಘಟನೆ ಸಂಭವಿಸಿದ್ದು ಶಿಬಿರದ ಎಲ್ಲೆಡೆ ಮೌನ ಆವರಿಸಿದೆ. ತಡರಾತ್ರಿಯಲ್ಲಿ ಈ ಘಟನೆ ಸಂಭವಿಸಿದ್ದು ಮಾವುತರು, ಸಿಬ್ಬಂದಿಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಛತ್ತೀಸ್‍ಘಡಕ್ಕೆ ಒಯ್ಯಲು ನಿರ್ಧರಿಸಿದ್ದ 3 ಆನೆಗಳಲ್ಲಿ ಅಜ್ಜಯ್ಯ ಮಾತ್ರ ಲಾರಿ ಹತ್ತಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿಗೋಡು ಶಿಬಿರದಿಂದ ಅಭಿಮನ್ಯುವನ್ನು ಕರೆತಂದು ಅಪರೇಷನ್ ಅಜ್ಜಯ್ಯ ಪ್ರಾರಂಭಿಸಿದ ಸಂದರ್ಭ
(ಮೊದಲ ಪುಟದಿಂದ) ಅಜ್ಜಯ್ಯ ಮದವೇರಿದ ಆನೆಯಂತೆ ವರ್ತಿಸತೊಡಗಿದ್ದು, ತನ್ನ ಕಾಲಿಗೆ ತೊಡಿಸಿದ್ದ ಭಾರೀ ಗಾತ್ರದ ಸರಪಳಿಗಳನ್ನು ತುಂಡರಿಸಿ ಕಾವೇರಿ ನದಿಯತ್ತ ಸಾಗಿದೆ. ನಂತರ ನದಿ ದಾಟಿ ನಂಜರಾಯಪಟ್ಟಣ ಗ್ರಾಮ ವ್ಯಾಪ್ತಿಯಲ್ಲಿ ರಾತ್ರಿ ಸುತ್ತಾಡಿದ್ದು ಅರಣ್ಯ ಇಲಾಖೆಯವರು ಅಜ್ಜಯ್ಯನ ಪತ್ತೆಗೆ ರಾತ್ರಿಯಿಡಿ ಹುಡುಕಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಾವೇರಿ ನದಿಯ ದ್ವೀಪವೊಂದರ ಬಳಿ ಪತ್ತೆಯಾದ ಅಜ್ಜಯ್ಯ ಮಧ್ಯಾಹ್ನ ತನಕ ನದಿ ನಡುವೆಯೇ ನಿಂತು ಕೋಪವನ್ನು ತಣಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಸ್ಥಳಕ್ಕೆ ಅರಣ್ಯಾಧಿಕಾರಿ ಗಳು, ಸಿಬ್ಬಂದಿಗಳು ಬಂದರೂ ಯಾವದೇ ರೀತಿಯ ಪ್ರಯೋಜನ ವಾಗದೆ ಹಿಂತಿರುಗಿ ಸ್ಥಳದಲ್ಲಿ ಕೆಲವು ಕಾರ್ಮಿ ಕರನ್ನು ಅಜ್ಜಯ್ಯನ ಚಲನವಲನ ಗಮನಿಸಲು ಬಿಟ್ಟಿದ್ದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಜ್ಜಯ್ಯನ ಮಾವುತರಾದ ಜೆ.ಕೆ. ಡೋಬಿ ಮತ್ತು ಅಣ್ಣಯ್ಯ ಅವರನ್ನು ಕಂಡ ಕೂಡಲೇ ಅಜ್ಜಯ್ಯ ನದಿ ತಟಕ್ಕೆ ಬಂದು ಶಾಂತವಾಗಿ ನಿಂತ ದೃಶ್ಯ ಕೂಡ ಎದುರಾಯಿತು. ಕಳೆದ 10 ವರ್ಷಗಳಿಂದ ದುಬಾರೆಯಲ್ಲಿ ಇದ್ದ ಅಜ್ಜಯ್ಯ ಇದೇ ಪ್ರಥಮ ಬಾರಿಗೆ ತನ್ನ ಸ್ಥಿಮಿತ ಕಳೆದುಕೊಂಡಿರುವದು ಕಂಡು ಬಂದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಶಕ್ತಿ’ಗೆ ಮಾವುತ ಜೆ.ಕೆ.ಡೋಬಿ ಪ್ರತಿಕ್ರಿಯಿಸಿದರು. ತಡರಾತ್ರಿಯಲ್ಲಿ ಮತ್ತಿಗೋಡು ಶಿಬಿರದಿಂದ ತರಿಸಲಾದ ಅಭಿಮನ್ಯು ಪರಾಕ್ರಮ ಕೂಡ ಈ ಅಜ್ಜಯ್ಯನ ಮೇಲೆ ಬೀರಿದೆ ಎನ್ನುವದು ಇನ್ನೊಬ್ಬ ಮಾವುತ ಅಣ್ಣಯ್ಯನ ಪ್ರತಿಕ್ರಿಯೆ ಯಾಗಿದೆ. ಸಂಜೆ ತನಕ ಶಾಂತವಾಗದ ಅಜ್ಜಯ್ಯನ ಬಗ್ಗೆ ಅಧಿಕಾರಿಗಳು ಯಾವದೇ ನಿರ್ಧಾರ ತೆಗೆದುಕೊಂಡಿರುವದು ತಿಳಿದು ಬಂದಿಲ್ಲ. ವನ್ಯಜೀವಿ ತಜ್ಞರನ್ನು ಸ್ಥಳಕ್ಕೆ ಕರೆಸುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
- ವರದಿ : ಚಂದ್ರಮೋಹನ್