ಗೋಣಿಕೊಪ್ಪಲು, ಜ. 23: ಇಲ್ಲಿನ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಸಂಘ ಪರಿವಾರದ ಸಂಚಾಲಕ ಅವಿನಾಶ್ ಮಾತನಾಡಿ, “ಸ್ವಾಮಿ ವಿವೇಕಾನಂದರ ಆದರ್ಶ ಹಾಗೂ ತತ್ವ ಸಿದ್ಧಾಂತಗಳನ್ನು ಇಂದಿನ ಯುವ ಜನತೆ ತಮ್ಮ ಬದುಕಿನಲ್ಲಿ ಅಳವಡಿಸಿ ಕೊಂಡು ದೇಶಕ್ಕಾಗಿ ತಾವು ಏನಾದರು ಉತ್ತಮ ಕೊಡುಗೆಗಳನ್ನು ನೀಡಲು ಪ್ರಯತ್ನಿಸಬೇಕು. ನಾವು ನಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುದರ ಜೊತೆಗೆ ಸಂವಿಧಾನ ಬದ್ದವಾದ ಮೂಲಭೂತ ಕರ್ತವ್ಯಗಳನ್ನು ಕೂಡ ಪಾಲಿಸಬೇಕು. ಸಧೃಡ ಹಾಗೂ ಸುಭದ್ರ ಭಾರತ ನಿರ್ಮಾಣಕ್ಕಾಗಿ ನಮ್ಮ ಕೈಲಾದ ಸೇವೆಯನ್ನು ಮಾಡಬೇಕು ಎಂದರು. ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಹೇಳುವ ಮೂಲಕ ವಿವೇಕಾನಂದರ ಆದರ್ಶ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದರು.
ಈ ಸಂದರ್ಭ ತಿತಿಮತಿಯ ಸಮಾಜ ಸೇವಕ ಚಕ್ಕೇರ ಮನು ನಂಜಪ್ಪ ಹಾಗೂ ಪ್ರಾಂಶುಪಾಲ ಪಟ್ಟಡ ಪೂವಣ್ಣ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಯೋಜನಾಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಹಾಗೂ ಎನ್.ಪಿ. ರೀತಾ ಉಪಸ್ಥಿತರಿದ್ದರು.