ವೀರಾಜಪೇಟೆ, ಜ. 23: ವಿದ್ಯಾರ್ಥಿಗಳು ಸಿಗುವಂತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯದ ಉತ್ತಮ ಪ್ರಜೆಯಾಗಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪಡಿಜ್ಞಾರಂಡ ಚಂಗಪ್ಪ ಹೇಳಿದರು.

ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸಮೀಪದ ಮೈತಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2017-18ರ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಂಗಪ್ಪ ಅವರು ಭಾರತ ದೇಶದಲ್ಲಿ ಯುವಶಕ್ತಿ ಹೆಚ್ಚಿದ್ದು ಯುವಕರು ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸಬೇಕಾಗಿದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಮಾತನಾಡಿ, ಯುವಕರು ಶಿಬಿರದಲ್ಲಿ ಕಲಿತಿರುವ ಉತ್ತಮ ಗುಣಗಳನ್ನು ಜೀವನದಲ್ಲಿಯೂ ಅಳವಡಿಸಿಕೊಂಡರೆ ಮುಂದೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಕದನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಛಲ, ಮತ್ತು ಸಮಯ ಪಾಲನೆ ಮಾಡುವ ಮೂಲಕ ದೇಶಕಟ್ಟುವಂತಾಗಬೇಕು ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಆಲತಂಡ ಸೀತಮ್ಮ ಪ್ರಕಾಶ್, ಶಾಲಾ ಮುಖ್ಯೋಪಾಧ್ಯಾಯರಾದ ಫ್ಲೊರಿನ ಮೆನೆಜಸ್, ಶಿಕ್ಷಕಿ ಭಾಗ್ಯ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಶಿಬಿರಾಧಿಕಾರಿಗಳಾದ ಪ್ರೊ. ಪಿ.ಎನ್. ನಾಗರಾಜಮೂರ್ತಿ ಸ್ವಾಗತಿಸಿದರು. ಪ್ರೊ. ಗುರುಪ್ರಸಾದ್ ವರದಿ ಓದಿದರು. ವನೀತ್ ಕುಮಾರ್ ನಿರೂಪಿಸಿ, ಎ. ಸತೀಶ್ ಕುಮಾರ್ ವಂದಿಸಿದರು.