ಕೂಡಿಗೆ, ಜ. 22: ರಾಜ್ಯ ಸರ್ಕಾರದ ಪ್ರಮುಖ ‘ಆತ್ಮ’ ಯೋಜನೆಯಡಿಯ ಒಂದು ದಿನದ ಕಾರ್ಯಾಗಾರ ಕೃಷಿ ಆವರಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಲಾಖೆಯ ಜಂಟಿ ಆಶ್ರಯದಲ್ಲಿ ನಡೆಯಿತು.

ಕಾರ್ಯಾಗಾರದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ನೆರವೇರಿಸಿದರು. ಜಿಲ್ಲಾ ಉಪ ಕೃಷಿ ನಿರ್ದೇಶಕ ಕೆ. ರಾಜು ಮಾತನಾಡಿ, ಆತ್ಮ ಯೋಜನೆಯು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಉಳಿಸಿ ಕೃಷಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ ಎಂದರು.

ಈ ಸಂದರ್ಭ ಆತ್ಮ ಯೋಜನೆಯಡಿ ಮುಖ್ಯ ರಾಜ್ಯ ಉಪ ನಿರ್ದೇಶಕ ಎಂ.ಕೆ. ನಂಸರಾಜ್, ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಿ.ಎ. ವೆಂಕಟೇಶ್ ಮೂರ್ತಿ, ಡಾ. ವರದರಾಜ್, ಕೂಡಿಗೆ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಟಿ.ಎನ್. ಕೋಮಲ ಇದ್ದರು. ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳು ಪಾಲ್ಗೊಂಡಿದ್ದರು.