ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಜಿಲ್ಲಾ ಸಮ್ಮೇಳನ ನಗರದ ಕ್ರಿಸ್ಟಲ್ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. 10 ಗಂಟೆಗೆ ಉದ್ಘಾಟನೆ, ವಿಚಾರಗೋಷ್ಠಿ, ಬಹುಭಾಷ ಕವಿಗೋಷ್ಠಿ, ಸಂಜೆ 3.05ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಇಂದು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ತಾ. 20 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಹೆಚ್.ಜಿ. ಭಾಗ್ಯ ತಿಳಿಸಿದ್ದಾರೆ.

ಬೆಳಿಗ್ಗೆ 10 ಗಂಟೆಗೆ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಗಳಿಸಿದ ಮೂರು ತಂಡಗಳಿಗೆ ಮೌಖಿಕ ಸುತ್ತಿನ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ ತಂಡವು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ ತಂಡಕ್ಕೆ ರೂ. 3,000, ಎರಡನೇ ಸ್ಥಾನ ಗಳಿಸಿದ ತಂಡಕ್ಕೆ ರೂ. 2,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವದು ಎಂದು ತಿಳಿಸಿದ್ದಾರೆ.

ಸ್ಪರ್ಧೆಗೆ 8 ಮತ್ತು 9 ನೇ ತರಗತಿಯಿಂದ ಒಬ್ಬ ವಿದ್ಯಾರ್ಥಿಯಂತೆ ಪ್ರತಿ ಪ್ರೌಢಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ಶಾಲಾ ಮುಖ್ಯಸ್ಥರಿಗೆ ತಿಳಿಸಿದ್ದು, ಲಿಖಿತ ಪರೀಕ್ಷೆ ಸ್ಪರ್ಧೆಯಲ್ಲಿ 8 ಮತ್ತು 9 ನೇ ತರಗತಿಗಳ ರಾಜ್ಯ ಪಠ್ಯಕ್ರಮ ಆಧರಿಸಿ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ 40 ಪ್ರಶ್ನೆಗಳು ಹಾಗೂ ಉಳಿದ 10 ಪ್ರಶ್ನೆಗಳು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಇರುತ್ತದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಂಯೋಜಕರಾದ ಟಿ.ಜಿ. ಪ್ರೇಮ್‍ಕುಮಾರ್ 9448588352 ಅಥವಾ ನೋಡಲ್ ಅಧಿಕಾರಿ ಕಾತ್ಯಾಯಿನಿ 9902249485 ಅವರನ್ನು ಸಂಪರ್ಕಿಸಬಹುದು.

ಇಂದು ಪ್ರತಿಭಟನೆ

ತಾ. 20 ರಂದು (ಇಂದು) ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಎನ್‍ಪಿಎಸ್ ನೌಕರರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎನ್‍ಪಿಎಸ್ ನೌಕರರ ಸಂಘದ ಅಧ್ಯಕ್ಷ ಮಾದೇಶ್ ತಿಳಿಸಿದ್ದಾರೆ.

ರಾಜ್ಯದ ಲಕ್ಷಾಂತರ ನೌಕರರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದು ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ನಿವೃತ್ತ ನೌಕರರ ಪಾಲಿಗೆ ಮರಣಶಾಸನವಾಗಿದೆ. ಈ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನಾದ್ಯಂತ ವಿವಿಧ ಇಲಾಖೆಗಳಿಂದ ಸುಮಾರು 400 ಮಂದಿ ಎನ್‍ಪಿಎಸ್ ನೌಕರರು ಭಾಗವಹಿಸಲಿದ್ದಾರೆ.

ಶಾಲಾ ವಾರ್ಷಿಕೋತ್ಸವ

ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷ ಮಹಾಂತೇಶ್ ಕೋಠಿ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ನಗರದ ಕನ್ನಿಕಾ ಬಡಾವಣೆಯಲ್ಲಿರುವ ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ತಾ. 20 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ ಶಯನ, ಲಿಟಲ್ ಫ್ಲವರ್ ವಿದ್ಯಾಸಂಸ್ಥೆಯ ಸುನಿತಾ ಪ್ರೀತು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರ ಶಿಕ್ಷಣ ಅಧಿಕಾರಿ ಟಿ.ಎನ್. ಗಾಯತ್ರಿ, ಸಿ.ಕೆ. ವೇಣುಗೋಪಾಲ್, ಕೋರನ ಸರಸ್ವತಿ ಇತರರು ಪಾಲ್ಗೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ನಡೆಯಲಿರುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಚಿನ್ನಸ್ವಾಮಿ, ಸ.ಪ.ಪೂ. ಕಾಲೇಜು ಪ್ರಾಂಶುಪಾಲ ಬೆಳ್ಯಪ್ಪ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಭಾಗವಹಿಸಲಿದ್ದಾರೆ.

ಕ್ರೀಡಾಕೂಟ

ಹುದುಗೂರು-ಕಾಳಿದೇವರ ಹೊಸೂರು ಶ್ರೀ ಕಾಳಿಕಾಂಬ ಯುವಕ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವು ತಾ. 20 ರಂದು (ಇಂದು) ಹುದುಗೂರು ಯುವಕ ಸಂಘದ ಆವರಣದಲ್ಲಿ ನಡೆಯಲಿದೆ.

ತಾ. 20 ಪುರುಷರ ಕಬಡ್ಡಿ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ ನಡೆಯಲಿದ್ದು, ನಾಳೆ ಪುರುಷರ ವಾಲಿಬಾಲ್, ಬಾಲಕ, ಬಾಲಕಿ ಹಾಗೂ ಗ್ರಾಮಸ್ಥರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಭಾನುವಾರ ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಕಾಳಿಕಾಂಭ ಯುವಕ ಸಂಘದ ಪ್ರಕಟu್ಲ ತಿಳಿಸಿದೆ.

ಉಪನ್ಯಾಸ ಕಾರ್ಯಕ್ರಮ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ತಾ. 20 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಹೆಚ್.ಐ.ವಿ ಏಡ್ಸ್ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಮಗಾರಿಗೆ ಚಾಲನೆ

ಪೊನ್ನಂಪೇಟೆ ವಿದ್ಯುತ್ ಸರಬರಾಜು ಕೇಂದ್ರದಿಂದ ಬಾಳೆಲೆಗೆ ಮುಖ್ಯ ರಸ್ತೆ ಮೂಲಕ ನೂತನ ತಡೆರಹಿತ 11 ಕೆ.ವಿ. ವಿದ್ಯುತ್ ಮಾರ್ಗವು ಮಂಜೂರಾಗಿದೆ. ಇದಕ್ಕೆ ರೂ. 1.58 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದಲ್ಲದೇ ಪೊನ್ನಂಪೇಟೆಯಿಂದ ಕಾನೂರುವರೆಗೆ ಮತ್ತೊಂದು ತಡೆರಹಿತ ವಿದ್ಯುತ್ ಮಾರ್ಗಕ್ಕೆ ರೂ. 80 ಲಕ್ಷ ಬಿಡುಗಡೆಯಾಗಿದೆ. ಇವೆರೆಡು ಕಾಮಗಾರಿಗೆ ತಾ. 20 (ಇಂದು) ಪೊನ್ನಂಪೇಟೆಯಿಂದ ಚಾಲನೆ ನೀಡಲಾಗುವದು ಎಂದು ಬಾಳೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಆದೇಂಗಡ ವಿನು ಉತ್ತಪ್ಪ ತಿಳಿಸಿದ್ದಾರೆ.

ಇಂದು ವಿಶೇಷ ಗ್ರಾಮಸಭೆ

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮುಕ್ಕೋಡ್ಲು ಗ್ರಾಮದ ಗ್ರಾಮ ವಿಕಾಸ ಯೋಜನೆಯ ಕ್ರಿಯಾಯೋಜನೆಯನ್ನು ತಯಾರಿಸುವ ಬಗ್ಗೆ ವಿಶೇಷ ಗ್ರಾಮಸಭೆಯು ತಾ. 20ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಮುಕ್ಕೋಡ್ಲು ಗ್ರಾಮದ ಭದ್ರಕಾಳೇಶ್ವರಿ ದೇವಸ್ಥಾನದ ಹತ್ತಿರವಿರುವ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಕಪ್ಪನ ಕಾವೇರಮ್ಮ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.