*ಸಿದ್ದಾಪುರ,ಜ.19 : ಗ್ರಾಮಸಭೆಗೆ ಒಬ್ಬರೂ ಗ್ರಾಮಸ್ಥರು ಸಹ ಬಾರದಿರುವದರಿಂದ ಗ್ರಾಮಸಭೆ ಮುಂದೂಡಿದ ಅಪರೂಪ ಪ್ರಸಂಗ ಇದಾಗಿದೆ. ವಾಲ್ನೂರು - ತ್ಯಾಗತ್ತೂರು ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ಅಧ್ಯಕ್ಷತೆಯಲ್ಲಿ ತಾ.18 ರಂದು ವಾಲ್ನೂರು ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಭೆ 11 ಗಂಟೆಗೆ ನಿಗಧಿಪಡಿಸಲಾಗಿತ್ತು ಸಭೆಗೆ ಜಿ.ಪಂ.ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ.ಸದಸ್ಯೆ ಸುಹಾದ್ ಆಶ್ರಫ್, ನೋಡಲ್ ಅಧಿಕಾರಿಯಾಗಿ ಜಿ.ಪಂ. ಅಭಿಯಂತರ ಫಯಾಜ್ ಅಹ್ಮದ್, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ಇಲಾಖೆಯವರು ಸಭೆಗೆ ಆಗಮಿಸಿದ್ದರು. ವಾಲ್ನೂರು ತ್ಯಾಗತ್ತೂರು ಗ್ರಾ.ಪಂ. ಉಪಾಧ್ಯಕ್ಷರು ಎಲ್ಲಾ ಸದಸ್ಯರು, ಪಿಡಿಓ ನಂಜುಡಸ್ವಾಮಿ ಇತರೆ ಸಿಬ್ಬಂದಿಗಳು ಹಾಜರಿದ್ದರು. ಆದರೆ ಅಪರಾಹ್ನ 12 ಗಂಟೆಯಾದರೂ ಒಬ್ಬರೂ ಗ್ರಾಮಸ್ಥರು ಸಭೆಗೆ ಬಾರದೆ ಇರುವದನ್ನು ಗಮನಿಸಿದ ಜಿ.ಪಂ. ಸದಸ್ಯರು ಇತರ ಸದಸ್ಯರು ದಂಗಾದರು ಏನು ಇದು ಎಂದು ಮಾತನಾಡಿಕೊಳ್ಳುತ್ತಿದ್ದರು.
ಕೊನೆಗೆ ವಿಧಿಯಿಲ್ಲದೆ ಗ್ರಾಮಸಭೆಗೆ ಗ್ರಾಮಸ್ಥರೇ ಬಾರದಿರುವದನ್ನು ಕಂಡು ಅಧ್ಯಕ್ಷರು ಗ್ರಾಮಸಭೆಯನ್ನು ಮುಂದೂಡಿದರು. ಸಾಮಾನ್ಯವಾಗಿ ಬೇರೆಡೆ ಗ್ರಾಮಸಭೆಗೆ ಅಧಿಕಾರಿಗಳು,ಸದಸ್ಯರು ಗೈರಾಗುವದರಿಂದ ಸಭೆಗೆ ಬಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗ್ರಾಮಸಭೆ ಮುಂದೂಡುವದು ಮಾಮೂಲಿ. ಆದರೆ ಇಲ್ಲಿ ಮಾತ್ರ ಗ್ರಾಮಸ್ಥರು ಕಾಫಿ ಕೊಯ್ಲು, ಗದ್ದೆ ಕೆಲಸದ ಋತುವಿನಲ್ಲಿ ನಮಗ್ಯಾಕೆ ಗ್ರಾಮಸಭೆಯ ಉಸಾಬರಿ ಎಂದು ಗೈರು ಹಾಜರಾಗಿರಬಹುದೇ? ಎಂಬ ಪ್ರಶ್ನೆ ಜನಪ್ರತಿನಿಧಿಗಳಿಗೆ ಮೂಡುವಂತಾಯಿತು. ಓರ್ವ ಗ್ರಾಮಸ್ಥರು ಸಹ ಸಭೆಗೆ ಬಾರದೆ ಇರುವದು ಕೊಡಗು ಜಿಲ್ಲೆಯ ಗ್ರಾಮಸಭೆಯ ಇತಿಹಾಸದಲ್ಲಿ ಇದು ದಾಖಲೆಯಾಗಲಿದೆ. - ಅಂಚೆಮನೆ ಸುಧಿ