ಸೋಮವಾರಪೇಟೆ, ಜ. 18: ಗ್ರಾಮ ಸಭೆಗಳಿಗೆ ಚಕ್ಕರ್ ಹಾಕುವ ನೋಡೆಲ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಗ್ರಾಮ ಸಭೆಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಅಧ್ಯಕ್ಷೆ ಪುಷ್ಪರಾಜೇಶ್ ಹಾಗೂ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಸಭೆಗಳಿಗೆ ನೋಡೆಲ್ ಅಧಿಕಾರಿ ಸೇರಿದಂತೆ ಹೋಬಳಿ ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಇದರಿಂದಾಗಿ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರಕುತ್ತಿಲ್ಲ. ಇತ್ತೀಚೆಗೆ ನೋಡೆಲ್ ಅಧಿಕಾರಿ ಹಾಗೂ ಅಧಿಕಾರಿಗಳ ಗೈರು ಹಾಜರಿಯಿಂದ ಚೆಟ್ಟಳ್ಳಿ ಗ್ರಾಮಸಭೆ ರದ್ದುಗೊಂಡಿದೆ. ಕೃಷಿ ಕೆಲಸ ಕಾರ್ಯಗಳನ್ನು ಬಿಟ್ಟು ಗ್ರಾಮ ಸಭೆಗೆ ಆಗಮಿಸಿರುತ್ತಾರೆ. ಗ್ರಾಮ ಸಭೆಗಳ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಕಾನೂನು ಪದವೀಧರರಿಗೆ ನೀಡಲಾಗುವ ಪ್ರೋತ್ಸಾಹ ಧನದ ದುರುಪಯೋಗವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ತಲಾ 4 ಮಂದಿ ಕಾನೂನು ಪದವೀಧರರಿಗೆ ತಲಾ ಒಂದು ಲಕ್ಷದಂತೆ ಪ್ರೋತ್ಸಾಹ ಧನ ನೀಡಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಫಲಾನುಭವಿಗಳು ಬಾರ್ ಕೌನ್ಸಿಲ್ ನಿಂದ ಅನುಮತಿ ಪಡೆಯದೆ, ಪ್ರೋತ್ಸಾಹಧನವನ್ನು ಪಡೆದು ಕೊಂಡಿದ್ದಾರೆ ಎಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸಮಾಜ ಕಲ್ಯಾಣಧಿಕಾರಿ ಚಿಕ್ಕಬಸವಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕು ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಗಳಿಗೆ ಗೈರುಹಾಜರಾಗು ತ್ತಿದ್ದಾರೆ. ಇಂದಿನ ಸಭೆಗೂ ಕಂದಾಯ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗೈರಾಗಿದ್ದಾರೆ. ನಿರಂತರ ಗೈರಾಗುವ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ಸೂಚಿಸಿದರು.

ತಾಲೂಕಿನ ಕೆಲವು ಹೋಬಳಿ ಮತ್ತು ಗ್ರಾಮೀಣ ಭಾಗದ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಯಥೇಚ್ಚವಾಗಿ ಮಾರಾಟವಾಗುತ್ತಿದ್ದು, ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಇಂತಹ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಉಪಾಧ್ಯಕ್ಷರು, ಅಬಕಾರಿ ಇಲಾಖೆಯ ನಿರೀಕ್ಷಕರಾದ ಅಪೂರ್ವ ಅವರಿಗೆ ಸೂಚಿಸಿದರು. ತೊರೆನೂರು, ಸುಂಟಿಕೊಪ್ಪ, ಐಗೂರಿನ ಕೆಲ ಅಂಗಡಿಗಳಲ್ಲಿ ರಾಜರೋಷವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ತಕ್ಷಣವೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.

ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಶುವೈದ್ಯಕೀಯ ಇಲಾಖೆಯ ಸಹಕಾರದೊಂದಿಗೆ ಪಟ್ಟಣ ಪಂಚಾಯಿತಿಯವರು ಸಂತಾನಹರಣ ಚಿಕಿತ್ಸೆಗೆ ಮುಂದಾಗಬೇಕು ಎಂದು ಉಪಾಧ್ಯಕ್ಷರು ಹೇಳಿದರು.

ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಗುಜರಿ ಬಸ್‍ಗಳು ಮತ್ತು ಇತರೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗುತ್ತಿದೆ. ಇದನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರ ವೆಂಕಟೇಶ್ ನಾಯಕ್ ಅವರಿಗೆ ಸೂಚಿಸಲಾಯಿತು.

ಸರ್ಕಾರದ ವಿಶೇಷ ಪ್ಯಾಕೇಜ್‍ನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳು ಕಳಪೆಯಾಗಿದ್ದು, ನಿಗದಿತ ದರಕ್ಕಿಂತ ಕಡಿಮೆ ಹಣ ಸೂಚಿಸಿ, ಟೆಂಡರ್‍ನ್ನು ಪಡೆದು ಕಳಪೆ ಕಾಮಗಾರಿ ಮಾಡುವ ಮೂಲಕ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ. ಅನುಭವವಿಲ್ಲದ ಗುತ್ತಿಗೆದಾರರಿಗೆ ಟೆಂಡರ್ ನೀಡಬಾರದು ಎಂದು ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಹೇಳಿದರು. ಸಭೆಯಲ್ಲಿ ತಾ.ಪಂ. ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಧರ್ಮಪ್ಪ ಇದ್ದರು.