*ಗೋಣಿಕೊಪ್ಪಲು, ಜ. 18: ಕನ್ನಡ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತವಾದುದು. ಇಂತಹ ಭಾಷೆಯನ್ನು ಕಲಿಯುವ ಮೂಲಕ ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೇರಲು ಶ್ರಮಿಸಬೇಕು ಎಂದು ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹೇಳಿದರು.
ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಮಂಡೇಪಂಡ ಅಕ್ಕಮ್ಮ ಗಣಪತಿ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾಷೆ ಮನುಷ್ಯನ ಭಾವನೆಗಳನ್ನು ಹಂಚಿಕೊಳ್ಳುವದಕ್ಕೆ ಇರುವ ಪ್ರಮುಖ ಮಾಧ್ಯಮ. ಯಾವದೇ ಭಾಷಾಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೂ ಕೂಡ ನಾಡಿನ ಭಾಷೆಯನ್ನು ಮರೆಯಬಾರದು ಎಂದು ತಿಳಿಸಿದರು.
ಜನರಲ್ ತಿಮಯ್ಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಬದುಕು ಮತ್ತು ಸಾಧನೆ ಕುರಿತು ಮಾತನಾಡಿದ ವೀರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕಿ ಕಾಳೇಂಗಡ ದಮಯಂತಿ ದೇಶ ಸೇವೆಯನ್ನು ಆರಿಸಿಕೊಂಡ ಜನರಲ್ ತಿಮ್ಮಯ್ಯ ಮತ್ತು ಕಾರ್ಯಪ್ಪ ಧೋರೋದಾತ್ತ ವ್ಯಕ್ತಿಗಳು.ನಂಬಿದ ಆದರ್ಶಗಳನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ. ಸಮಯ ಪಾಲನೆಯಲ್ಲಿ ಅತ್ಯಂತ ಕಟ್ಟುನಿಟ್ಟಿನ ವ್ಕಕ್ತಿಗಳಾಗಿದ್ದರು. ಇಬ್ಬರೂ ಸೈನ್ಯವನ್ನು ರಾಜಕೀಯದಿಂದ ದೂರವಿರಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿದರು.ಇವರ ತತ್ವ ಮತ್ತು ಆದರ್ಶ ಯುವ ಜನಾಂಗಕ್ಕೆ ದಾರಿದೀಪವಾಗಿವೆ ಎಂದು ನುಡಿದರು.
ಕೊಡವ ಮಹಿಳಾ ಸಂಸ್ಕøತಿ ಕುರಿತು ಉಪನ್ಯಾಸ ನೀಡಿದ ಮುಲ್ಲೇಂಗಡ ಬೇಬಿ ಚೋಂದಮ್ಮ ಕೊಡವ ಮಹಿಳೆಯರು ವೀರರು ಶೂರರು ಆಗಿದ್ದಾರೆ. ಹಿಂದೆ ಹುಲಿಯನ್ನು ಕೊಂದ ಮಹಿಳೆಯರಿದ್ದರು. ಚಿಕ್ಕವೀರ ರಾಜೇಂದ್ರ ಕೊಡವ ಮಹಿಳೆಯರನ್ನು ಬೇಟೆಗೆ ಕರೆದುಕೊಂಡು ಹೋಗುತ್ತಿದ್ದ ಬಗ್ಗೆ ಹಲವು ಉಲ್ಲೇಖಗಳಿವೆ. ಕೊಡವ ಸಂಸ್ಕøತಿ ವಿಧವಾ ವಿವಾಹಕ್ಕೆ ಒತ್ತು ನೀಡಿದ ಹಾಗೆ ಮಾನವೀಯತೆಗೂ ಒತ್ತು ನೀಡಿತ್ತು. ಸ್ವಾತಂತ್ರ್ಯ ಚಳುವಳಿಗೆ ಕೊಡವ ಮಹಿಳೆಯರ ಪಾತ್ರ ಅತ್ಯಂತ ಹಿರಿದು ಎಂದು ತಿಳಿಸಿದರು.
ಬಾಳೆಲೆ ಸೆಂಟ್‍ರ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಚಿಮ್ಮಣಮಾಡ ಕೃಷ್ಣ ಗಣಪತಿ, ಪ್ರಾಂಶುಪಾಲೆ ಕೆ.ಪಿ.ಪೊನ್ನಮ್ಮ, ಹಿರಿಯ ಶಿಕ್ಷಕ ಕೆ.ಚಂದ್ರಶೇಖರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಮಧೋಶ್ ಪೂವಯ್ಯ ಅಧ್ಯಕ್ಷತೆ ವಹಿಸಿದ್ದರು. ಎಜುಕೇಷನ್ ಸೊಸೈಟಿ ಸಹ ಕಾರ್ಯದರ್ಶಿ ಪಿ.ಎಂ.ಮೋಹನ್, ಕಸಾಪ ಸದಸ್ಯರಾದ ವೈಲೇಶ್, ನಳಿನಿ, ಕಾರ್ಯದರ್ಶಿ ರೇಖಾ ಶ್ರೀಧರ್ ಹಾಜರಿದ್ದರು.
- ವರದಿ: ಎನ್.ಎನ್.ದಿನೇಶ್