ಮಡಿಕೇರಿ, ಜ, 18: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ತಾ. 20 ರಂದು ಮಡಿಕೇರಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಮೊದಲಿಗೆ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವದು. ಲಿಖಿತ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಗಳಿಸಿದ ಮೂರು ತಂಡಗಳಿಗೆ ನಂತರ ಮೌಖಿಕ ಸುತ್ತಿನ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುವದು. ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ತಂಡವು ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಲಿದೆ.
ಮೌಖಿಕ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಎರಡು ಸ್ಥಾನ ಗಳಿಸುವ ತಂಡಗಳಿಗೆ ಕ್ರಮವಾಗಿ ರೂ. 3,000 ಮತ್ತು ರೂ. 2,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವದು. ಈ ಸ್ಪರ್ಧೆಗೆ ಪ್ರತಿ ಪ್ರೌಢಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳನ್ನು (8 ಮತ್ತು 9 ನೇ ತರಗತಿಯಿಂದ ಓರ್ವ ವಿದ್ಯಾರ್ಥಿಯಂತೆ) ಕಳುಹಿಸಿಕೊಡಲು ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಹೆಚ್.ಜಿ. ಭಾಗ್ಯ ತಿಳಿಸಿದ್ದಾರೆ.
ಲಿಖಿತ ಸುತ್ತಿನ ಸ್ಪರ್ಧೆಯಲ್ಲಿ 8 ಮತ್ತು 9 ನೇ ತರಗತಿಗಳ (ರಾಜ್ಯ ಪಠ್ಯಕ್ರಮ ಆಧರಿಸಿ) ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ 40 ಪ್ರಶ್ನೆಗಳು ಹಾಗೂ ಇನ್ನುಳಿದ 10 ಪ್ರಶ್ನೆಗಳು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಇರುತ್ತದೆ. ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ (9448588352) ಅಥವಾ ಕಾರ್ಯಕ್ರಮದ ನೋಡಲ್ ಅಧಿಕಾರಿ ಕಾತ್ಯಾಯಿನಿ (99022 49485) ಅವರನ್ನು ಸಂಪರ್ಕಿಸಬಹುದು.