ಟಿ.ಪಿ. ರಮೇಶ್ ವಿಶ್ಲೇಷಣೆ
ಮಡಿಕೇರಿ, ಜ. 18: ಹನ್ನೆರಡನೆ ಶತಮಾನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಸಾಮಾಜಿಕ ಕಾರ್ಯಕರ್ತರಾಗಿ ಕೃಷಿ ಪ್ರಧಾನ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಕೆರೆ, ಕಟ್ಟೆ, ಬಾವಿ ನಿರ್ಮಿಸಿ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗೆ ಪ್ರಧಾನ ಆದ್ಯತೆ ನೀಡಿದರು ಎಂದು ಟಿ.ಪಿ. ರಮೇಶ್ ಪ್ರತಿಪಾದಿಸಿದರು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಹಸಿವು, ಬಡತನ, ಅಸಮಾನತೆ, ಕಂದಾಚಾರ, ಮೌಢ್ಯತೆ ಹೀಗೆ ಹಲವು ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಶರಣರು ಶ್ರಮಿಸಿದರು ಎಂದರು.
ಸರಸ್ವತಿ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಶ್ರೀಕುಮಾರ್ ಮಾತನಾಡಿ, ಹನ್ನೆರಡನೆ ಶತಮಾನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಶರಣರು ಮಾನವ ಪರವಾದ ಧರ್ಮ ಪ್ರತಿಪಾದಿಸಿದರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಶಿವಯೋಗಿ ಸಿದ್ದರಾಮರ ಬಗ್ಗೆ ಪುಸ್ತಕ ಹೊರತರಬೇಕು ಎಂದು ಸಲಹೆ ನೀಡಿದರು. ಅಖಿಲ ಕರ್ನಾಟಕ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸುಜಿತ್ ಮಾತನಾಡಿ ಭೋವಿ ಸಮಾಜದ ವತಿಯಿಂದ ಪೆಬ್ರವರಿ 15 ರಂದು ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಬೋವಿ ಸಮಾಜದ ಮುಖಂಡ ಮಂಜಪ್ಪ ಮಾತನಾಡಿದರು. ಜಿ.ಪಂ. ಸಿಇಒ ಪ್ರಶಾಂತ್ ಮಿಶ್ರಾ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರಾಜ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ, ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ವಂದಿಸಿದರು