*ಸಿದ್ದಾಪುರ, ಜ. 18 : ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯ, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ 60ನೇ ಹುಟ್ಟು ಹಬ್ಬವನ್ನು ಗ್ರಾಮದ ಹಬ್ಬ ಎಂಬಂತೆ ಸಂಭ್ರಮದಿಂದ ಆಚರಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪ್ಪಯ್ಯ ಹಾಗೂ ಗ್ರಾಮದ ಪ್ರಮುಖರು ಬಲ್ಲಾರಂಡ ಮಣಿ ಉತ್ತಪ್ಪ ಅವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಯೋಜಿಸಿದರು. ಕಾರ್ಯಕ್ರಮವನ್ನು ಚೆಟ್ಟಳ್ಳಿಯ ನರೇಂದ್ರ ಮೋದಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೊಡಗು ಜಿಲ್ಲಾ ಗೌಡ ಸಮಾಜ ಅಧ್ಯಕ್ಷ ಪೇರಿಯಾನ ಜಯಾನಂದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಜಿ.ಎಲ್. ನಾಗರಾಜ್, ಶಕ್ತಿ ಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್, ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಅಂಚೆಮನೆ ಸುಧಿ, ಲೆಕ್ಕ ಪರಿಶೋಧಕ ರಮೇಶ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕೃಷಿ ಪತ್ತಿನ ಆಡಳಿತ ಮಂಡಳಿ ಸೇರಿದಂತೆ ಗ್ರಾಮದ ಪ್ರಮುಖರು ಬಲ್ಲಾರಂಡ ಮಣಿ ಉತ್ತಪ್ಪ ಅವರ ಪತ್ನಿ ಗಂಗಮ್ಮ ಉತ್ತಪ್ಪ ಹಾಗೂ ಕುಟುಂಬ ವರ್ಗದವರನ್ನು ವೇದಿಕೆಗೆ ಅಹ್ವಾನಿಸಿ ಸನ್ಮಾನಿಸಿದರು.
ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಕಾವೇರಿ ಕಾಲೇಜು ಉಪನ್ಯಾಸಕಿಯಾಗಿರುವ ಪುತ್ರಿ ಅಂಬಿಕಾ ನಾಣಯ್ಯ ಹೇಳಿದರು., ಸೊಸೆ ಶೋಭಿಕಾ ಕಾರ್ಯಪ್ಪ ಉಪಸ್ಥಿತರಿದ್ದರು.
ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಮಣಿ ಉತ್ತಪ್ಪ ಬಾಲ್ಯದಿಂದಲೇ ಸಂಕಷ್ಟ ಮತ್ತು ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸಿ ಜಿಲ್ಲೆಯಲ್ಲಿ ಅನೇಕ ಹೋರಾಟಗಳನ್ನು ರೂಪಿಸಿದ್ದಾರೆ ಎಂದು ಚಿ.ನಾ. ಸೋಮೇಶ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಕಣಜಾಲು ಪೂವಯ್ಯ ಮಣಿ ಉತ್ತಪ್ಪ ಅವರ ಬಗ್ಗೆ ಕವನ ಬರೆದು ವೇದಿಕೆಯಲ್ಲಿ ವಾಚಿಸಿದರು. ಮತ್ತೋರ್ವ ಚುಟುಕು ಸಾಹಿತಿ ಹಾ.ತಿ. ಜಯಪ್ರಕಾಶ್ ಜಿಲ್ಲೆಯಲ್ಲಿ ಜಾತಿ ಆಧಾರದಲ್ಲಿ ಮತ ವಿಂಗಡನೆ ಮತ್ತು ಜನಾಂಗವನ್ನು ವಿಂಗಡಿಸುತ್ತಿರುವದರ ಬಗ್ಗೆ ಜನಜಾಗೃತಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ಮೇರಿ ಅಂಬುದಾಸ್, ಬಟ್ಟೀರ ವೇಣು ನಾಚಪ್ಪ ಸೇರಿದಂತೆ ಅನೇಕರು ಮಣಿ ಉತ್ತಪ್ಪ ಅವರ ಕುರಿತು ಮೆಚ್ಚುಗೆಯ ಮಾತನಾಡಿದರು.
ಮಣಿ ಉತ್ತಪ್ಪನವರ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆಂಗಿನ ಸಸಿಗಳನ್ನು ನೆಡಲಾಯಿತು.ಸಮಾರಂಭದ ನಂತರ ಉಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಹೆಚ್.ಎಸ್.ತಿಮ್ಮಪಯ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಳ್ಳಂಡ ಮಾಯಮ್ಮ ಪ್ರಾರ್ಥಿಸಿ ವಂದಿಸಿದರು. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಮಣಿ ಉತ್ತಪ್ಪನವರ ಅಭಿಮಾನಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ವರದಿ: ಅಂಚೆಮನೆ ಸುಧಿ, ಚಿತ್ರ : ಲೋಯಿಸ್.