ಮಡಿಕೇರಿ, ಜ. 18: ಹೇಳಿ ಕೇಳಿ ಮಡಿಕೇರಿ ಬೆಳೆಯುತ್ತಿರುವ ನಗರ..., ಜನಸಂಖ್ಯೆಗಿಂತ ಹೆಚ್ಚಾಗಿ ವಾಹನಗಳ ಸಂಖ್ಯೆ ಬೆಳೆಯುತ್ತಿದೆ..., ಅದರಲ್ಲೂ ಪ್ರವಾಸಿಗರ ಬೀಡಾಗಿರುವ ಮಂಜಿನ ನಗರಿಯಲ್ಲಿ ಪ್ರವಾಸಿಗರು ಹಾಗೂ ವಾಹನಗಳು ತುಂಬಿಕೊಳ್ಳುತ್ತಿವೆ. ದಿನೇ ದಿನೇ ಜನ - ವಾಹನ ಸಾಂಧ್ರತೆ ಹೆಚ್ಚಾಗುತ್ತಿದ್ದು, ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ರಸ್ತೆ ದಾಟುವದು, ನಡೆದಾಡುವದು ಪ್ರಯಾಸವೆನಿಸುತ್ತಿದೆ.
ರಾಜಾಸೀಟು ಇಲ್ಲಿನ ಪ್ರಮುಖ ಪ್ರವಾಸಿ ತಾಣ..., ಇಲ್ಲಿಗೆ ತೆರಳುವ ರಸ್ತೆಯೇನೋ ವಿಶಾಲವಾಗಿದೆ. ಹೊಂಡಾ - ಗುಂಡಿಗಳಿಂದ ಕೂಡಿದ್ದ ಈ ರಸ್ತೆಯನ್ನು ಮೊನ್ನೆಯಷ್ಟೇ ಮುಖ್ಯಮಂತ್ರಿಗಳು ಬಂದ ಸಂದರ್ಭ ದುರಸ್ತಿಪಡಿಸಲಾಗಿದೆ. ಹಾಗಾಗಿ ಇಲ್ಲಿ ವಾಹನಗಳ ಸಂಚಾರ ಸುಗಮವಾದಂತಾಗಿದೆ. ಸುಮಗ್ರ ಅನ್ನುವದಕ್ಕಿಂತ ‘ವೇಗ’ದ ಚಾಲನೆಗೆ ಅನುಕೂಲವಾದಂತಾಗಿದೆ. ಈ ರಸ್ತೆಯಲ್ಲಿ ಬೆಳಿಗ್ಗೆ ಹಾಗೂ ಸಂಜೆ ಜನಸಂದಣಿಯೊಂದಿಗೆ ವಾಹನಗಳ ಓಡಾಟ ರಭಸವಾಗಿದೆ.
ಇದು ಬರೇ ರಸ್ತೆ ಮಾತ್ರವಾಗಿದಿದ್ದರೆ ಅಷ್ಟೇನು ತೊಂದರೆ ಇರಲಿಲ್ಲ ಅದರೇ ಇದೇ ರಸ್ತೆಯಲ್ಲಿ ಶಾಲೆಯೊಂದಿದೆ, ಜಿಲ್ಲಾಧಿಕಾರಿಗಳ ಕಚೇರಿಗೂ ಈ ರಸ್ತೆಗಾಗಿಯೇ ತೆರಳಬೇಕಿದೆ. ಜೊತೆಗೆ ರಾಜಾಸೀಟು, ಎಫ್.ಎಂ.ಸಿ. ಕಾಲೇಜು ಕಡೆಗಿನ ರಸ್ತೆಯೂ ಇದಾಗಿದೆ. ಈ ರಸ್ತೆಯಲ್ಲಿ ಯಾವದೇ ರಸ್ತೆ ಉಬ್ಬುಗಳಿಲ್ಲ; ಬ್ಯಾರಿಕೇಡ್‍ಗಳಿಲ್ಲ, ಯಾವದೇ ಸಂಚಾರಿ ಪೊಲೀಸರೂ ಇರುವದಿಲ್ಲ.
ಬೆಳಿಗ್ಗೆ ಹಾಗೂ ಸಂಜೆ ವೇಳೆ ಶಾಲಾ ಸಮಯ, ಕಚೇರಿ ವೇಳೆಯಲ್ಲಿ ವಿದ್ಯಾರ್ಥಿಗಳು ಹಾಗೂ ನೌಕರರು ರಸ್ತೆ ದಾಟಲು ಇಲ್ಲಿ ಹರ ಸಾಹಸ ಪಡಬೇಕಿದೆ. ಒಂದು ಕಡೆಯಿಂದ ನೇರವಾದ ರಸ್ತೆಯಲ್ಲಿ ವಾಹನಗಳು ವೇಗವಾಗಿ ಬರುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ವಾಹನಗಳೂ ತಿರುವಿನಲ್ಲಿ ಎದುರಾಗುತ್ತದೆ. ಈ ಸಂದರ್ಭ ಮಕ್ಕಳು ಕಕ್ಕಾಬಿಕ್ಕಿಯಾಗಿ ಅತ್ತಿಂದಿತ್ತ ದಿಕ್ಕು ತೋಚದೆ ಜೀವಭಯದಿಂದ ಪರದಾಡುವದು ಸಹಜವಾಗಿದೆ.
ಮೊನ್ನೆ ರಸ್ತೆ ದುರಸ್ತಿ ಸಂದರ್ಭ ಇರಿಸಿದ್ದ ಬ್ಯಾರಿಕೇಡ್‍ಗಳು ರಸ್ತೆ ಬದಿಯಲ್ಲಿ ಬಿದ್ದಿರುತ್ತವೆ. ಕನಿಷ್ಟ ಆ ಬ್ಯಾರಿಕೇಡ್‍ಗಳನ್ನಾದರೂ ರಸ್ತೆಗಡ್ಡವಿರಿಸಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಬಹುದಲ್ಲವಾ..., ಎಂಬದು ಪೋಷಕರ ಪ್ರಶ್ನೆಯಾಗಿದೆ. ಅಲ್ಲದೆ ಕಾಫಿ ಕೃಪಾ ಕಟ್ಟಡ ಬಳಿ ಹಾಗೂ ಗಾಂಧಿ ಪ್ರತಿಮೆ ಎದುರು ರಸ್ತೆ ಉಬ್ಬುಗಳನ್ನೂ ನಿರ್ಮಿಸಿ ವೇಗಕ್ಕೆ ಕಡಿವಾಣ ಹಾಕಿ ಮುಂದೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬೇಕಾಗಿದೆ ಎಂಬದು ಸಾರ್ವಜನಿಕ ಕಳಕಳಿಯಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣ ಸಂದರ್ಭ ಮಣ್ಣನ್ನು ಹೊತ್ತೊಯ್ಯುತ್ತಿದ್ದ ಲಾರಿಯಡಿಗೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪೊಲೀಸ್ ಇಲಾಖೆ ಹಾಗೂ ನಗರಸಭೆ ಇತ್ತ ಗಮನ ಹರಿಸುವದೊಳಿತು. ಸದ್ಯದ ಮಟ್ಟಿಗೆ ಬೆಳಿಗ್ಗೆ ಹಾಗೂ ಸಂಜೆ ಸಂಚಾರಿ ಪೊಲೀಸರನ್ನು ನಿಯೋಜಿಸಿದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಅನುಕೂಲವಾಗಲಿದೆ. - ಸಂತೋಷ್