ಸೋಮವಾರಪೇಟೆ,ಜ.17: ಕಳೆದ ತಾ. 13ರಿಂದ ನಡೆಯುತ್ತಿದ್ದ ಸಮೀಪದ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೋತ್ಸವಕ್ಕೆ ಇಂದು ವಿಧ್ಯುಕ್ತ ತೆರೆ ಬಿದ್ದಿತು.

ನಿನ್ನೆ 59ನೇ ಮಹಾರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ಅದ್ದೂರಿಯಾಗಿ ನೆರವೇರಿದ್ದು, ಇಂದು ದೇವಾಲಯ ದಲ್ಲಿ ಮಹಾ ಸಂಪ್ರೋಕ್ಷಣೆ ವಿಧಿ ವಿಧಾನಗಳು ನಡೆದವು. ಇದರೊಂದಿಗೆ ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾ ಮಂಗಳಾರತಿ ಮತ್ತು ಮಂಗಳ ಪ್ರಾರ್ಥನೆಯೊಂದಿಗೆ ಜಾತ್ರೋತ್ಸವ ಮುಕ್ತಾಯಗೊಂಡಿತು.

ಜಾತ್ರಾ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಪೂಜಾ ಕೈಂಕರ್ಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿರು ವದು ಶ್ಲಾಘನೀಯ ಕಾರ್ಯ. ದೈವಿಕ ಕಾರ್ಯಗಳು, ದೇವಾಲಯಗಳು ಇರುವ ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಅಧ್ಯಕ್ಷ ಜಿ.ಎಸ್. ರಘುಕುಮಾರ್ ಮಾತನಾಡಿ, ಶ್ರೀಕುಮಾರಲಿಂಗೇಶ್ವರ ದೇವರ 59ನೇ ಮಹಾ ರಥೋತ್ಸವ ಮತ್ತು ಜಾತ್ರಾ ಮಹೋತ್ಸವಕ್ಕೆ ಶಾಂತಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಹೊರ ಭಾಗದ ದಾನಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಯಡೂರು ಗ್ರಾಮದ ಡಿ.ಕೆ. ಗಣಪತಿ, ಕೂತಿ ಗ್ರಾಮದ ಕೆ.ಪಿ. ಜೋಯಪ್ಪ ಹಾಗೂ ಯು.ಎ. ರತನ್ ಅವರುಗಳನ್ನು ದೇವಾಲಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ. ಧರ್ಮಪ್ಪ, ಎಪಿಎಂಸಿ ಸದಸ್ಯ ಕೆ.ಕೆ. ಗೋಪಾಲ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಪಿ. ಗಣಪತಿ, ಧರ್ಮದರ್ಶಿ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾತ್ರೋತ್ಸವ ಅಂಗವಾಗಿ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಆಯೋಜಿಸ ಲಾಗಿದ್ದ ಜಿಲ್ಲಾ ಮಟ್ಟದ ಮಹಿಳೆಯರ ಥ್ರೋಬಾಲ್, ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟ ಸೇರಿದಂತೆ ಇನ್ನಿತರ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.