ಮಡಿಕೇರಿ, ಜ. 16: 19ನೇ ವರ್ಷದ ಕೊಡವ ಕುಟುಂಬಗಳ ನಡುವಿನ ಮಡ್ಲಂಡ ಕ್ರಿಕೆಟ್ ಕಪ್ 2018ರ ಲೋಗೋವನ್ನು ಬಿಡುಗಡೆ ಮಾಡಲಾಯಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಕ್ಕಂದೂರು ಹಾಗೂ ಮುಕ್ಕೋಡ್ಲುವಿನ ನಡುವೆ ಇರುವ ಗ್ರಾಮೀಣ ಪ್ರದೇಶದ ಮೆಗತಾಳ್‍ನಲ್ಲಿ ಮಡ್ಲಂಡ ಕುಟುಂಬ ಸೇರಿದ್ದು, ಅತೀ ಸಣ್ಣ ಜನ ಸಂಖ್ಯೆಯನ್ನು ಹೊಂದಿರುವ ಕುಟುಂಬವಾದರೂ ಕ್ರಿಕೆಟ್ ಹಬ್ಬ ಆಯೋಜಿಸಿರುವದು ಅತ್ಯಂತ ಶ್ಲಾಘನೀಯ ಕಾರ್ಯ. ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಇಂದು ಮಡ್ಲಂಡ ಕುಟುಂಬ ಕ್ರಿಕೆಟ್ ಹಬ್ಬದ ಆಯೋಜನೆಯ ಹೊಣೆ ಹೊತ್ತುಕೊಳ್ಳಲು ಗ್ರಾಮಸ್ಥರ ಸಹಕಾರವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯೆಯಾಗಿ ತಮ್ಮಿಂದ ಸಾಧ್ಯವಿರುವಷ್ಟು ಅನುದಾನ ಒದಗಿಸಲು ಪ್ರಮಾಣಿಕವಾಗಿ ಪ್ರಯತ್ನ ನಡೆಸಲಾಗುವದು ಎಂದು ಭರವಸೆ ನೀಡಿದರು.
ಮಡ್ಲಂಡ ಕ್ರಿಕೆಟ್ ಕಪ್ 2018ರ ಲೋಗೋವನ್ನು ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಬಿಡುಗಡೆ ಮಾಡಿ ಮಾತನಾಡಿ ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಹೆಸರುಗಳಿಸಿದೆಯಾದರೂ ಕೂಡ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯಗಳು ದೊರೆಯುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಕ್ರೀಡಾಪಟುಗಳಿದ್ದು, ಕೌಟುಂಬಿಕ ಕುಟುಂಬಗಳ ನಡುವಿನ ಕ್ರೀಡಾಕೂಟ ಮಕ್ಕ ಭವಿಷ್ಯಕ್ಕೆ ಸಹಕಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಕಪ್ ಬ್ರೋಷರನ್ನು ಬಿಡುಗಡೆ ಮಾಡಿ ಮಾತನಾಡಿ, ಈ ಹಿಂದೆ ಶಾಂತೆಯಂಡ ಕುಟುಂಬ ಹಾಕಿ ಹಬ್ಬವನ್ನು ಆಯೋಜಿಸಿತ್ತು ಶಾಂತೆಯಂಡ ಕುಟುಂಬ ಕೂಡ ಅತೀ ಚಿಕ್ಕ ಕುಟುಂಬವಾಗಿದ್ದು, ಯಶಸ್ವಿಯಾಗಿ
(ಮೊದಲ ಪುಟದಿಂದ) ಹಾಕಿ ಹಬ್ಬ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದರಂತೆ ಮಡ್ಲಂಡ ಕುಟುಂಬ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ ಎಂದು ಶುಭ ಹಾರೈಸಿದರು.
ದಿನದಿಂದ ದಿನಕ್ಕೆ ಕೊಡವರಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಂತಹ ಕ್ರೀಡಾಕೂಟದಿಂದ ಕುಟುಂಬದವರಲ್ಲಿ ಒಗ್ಗಟ್ಟು ಮೂಡುತ್ತದೆ. ಈ ಒಗ್ಗಟ್ಟನ್ನು ಎಂದಿಗೂ ಮುಂದುವರೆಸಿಕೊಂಡು ಹೋಗಬೇಕಿದೆ ಎಂದರು.
ಮಡ್ಲಂಡ ಕುಟುಂಬದ ಪಟ್ಟೆದಾರ ಬಿ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ರಮೇಶ್ ಉತ್ತಪ್ಪ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ಮಡ್ಲಂಡ ಕ್ರಿಕೆಟ್ ಕಪ್ ಅಧ್ಯಕ್ಷ ಬೋನಿಶ್ ಸುಬ್ಬಯ್ಯ ಸೇರಿದಂತೆ ಮಡ್ಲಂಡ ಕುಟುಂಬದವರು ಪಾಲ್ಗೊಂಡಿದ್ದರು. ಬೊಳ್ಳಜಿರ ಯಮುನಾ ಅಯ್ಯಪ್ಪ ಪ್ರಾರ್ಥಿಸಿ, ಬೊಳ್ಳಜಿರ ಬಿ. ಅಯ್ಯಪ್ಪ ವಂದಿಸಿದರು. ಬಾಳೆಯಂಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.