ಕುಶಾಲನಗರ, ಜ. 17: ಕುಶಾಲನಗರ ಉದ್ಯಮಿ ಉಮಾಶಂಕರ್ ಅವರು ತಮ್ಮ ತಾಯಿಯ ಸ್ಮರಣಾರ್ಥ ಕುಶಾಲನಗರದ ಕೆಲವು ಹಿರಿಯ ನಾಗರಿಕರು ಸೇರಿದಂತೆ ಒಟ್ಟು 200 ಮಂದಿಯನ್ನು ಪುಣ್ಯಸ್ಥಳ ಶೃಂಗೇರಿ ಹಾಗೂ ಹೊರನಾಡು ಕ್ಷೇತ್ರಗಳಿಗೆ ಉಚಿತವಾಗಿ ಕರೆದೊಯ್ಯಲಿದ್ದಾರೆ.

ಈ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಉಮಾಶಂಕರ್ ತಾವು ಕಳೆದ ಬಾರಿ 145 ಮಂದಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಚಿತವಾಗಿ ಕರೆದೊಯ್ದಿರುವದಾಗಿ ಹೇಳಿದರು. ತಮ್ಮ ಅಗಲಿದ ತಾಯಿಯ ಸ್ಮರಣಾರ್ಥ ಕುಶಾಲನಗರದ ಬಡ-ಮಧ್ಯಮ ಹಾಗೂ ಹಿರಿಯ ನಾಗರಿಕರಿಗೆ ಈ ಸೌಲಭ್ಯ ಸಿಗಲಿದೆ ಎಂದ ಅವರು, ಇದಕ್ಕಾಗಿ ಶ್ರೀ ಗುರು ರಾಘವೇಂದ್ರ ಮೋಟಾರ್ ಸರ್ವಿಸ್‍ನ ಮಾಲೀಕರು ರಿಯಾಯಿತಿ ದರದಲ್ಲಿ 4 ಬಸ್‍ಗಳನ್ನು ಒದಗಿಸಿರುವದಾಗಿ ಹೇಳಿದರು.

ಪ್ರವಾಸದ ಸಂದರ್ಭ ಪ್ರಯಾಣಿಕರಿಗೆ ಉಚಿತ ಊಟ, ತಿಂಡಿಯ ವ್ಯವಸ್ಥೆ ಇದ್ದು, ತಾ. 26 ರಂದು ಬೆಳಿಗ್ಗೆ 5 ಗಂಟೆಗೆ ಪ್ರವಾಸ ಪ್ರಾರಂಭಗೊಳ್ಳಲಿದೆ. ಮುಂದೆ ಕೊಲ್ಲೂರು ಹಾಗೂ ಮೈಸೂರು ಚಾಮುಂಡಿ ಬೆಟ್ಟಕ್ಕೆ ಪ್ರವಾಸ ಹಮ್ಮಿಕೊಳ್ಳುವದಾಗಿ ಉಮಾಶಂಕರ್ ಹೇಳಿದರು.

ಗೋಷ್ಠಿಯಲ್ಲಿ ಬಿ. ಜನಾರ್ದನ ಪ್ರಭು, ವಿ.ವಿ. ತಿಲಕ್, ಕೆ.ಎನ್. ದೇವರಾಜು, ಕೆ.ಸಿ. ನಾಗೇಶ್ ಉಪಸ್ಥಿತರಿದ್ದರು.