ವೀರಾಜಪೇಟೆ, ಜ. 17: ವ್ಯಕ್ತಿತ್ವ ಎಲ್ಲಾರಲ್ಲೂ ಇರುತ್ತದೆ. ನಮ್ಮನ್ನು ಹುಡುಕಿಕೊಂಡು ಬರುವದಿಲ್ಲ. ನಮ್ಮಷ್ಟಕ್ಕೆ ನಾವೇ ರೂಪಿಸಿಕೊಳ್ಳಬೇಕು ಎಂದು ಅರಮೇರಿ-ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈತಾಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಲು ಬಾಹ್ಯ ಶಕ್ತಿಯ ಬೆಂಬಲ ಪಡೆದುಕೊಂಡು ಸರಿ ದಾರಿಗೆ ತೆಗೆದುಕೊಂಡು ಹೋಗಲು ನಾವು ಬದ್ಧರಾಗಿರಬೇಕಾಗುತ್ತದೆ. ಸಮಾಜದಿಂದ ನಾವು ಎಲ್ಲಾ ಅನುಕೂಲಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಆದರೆ ನಾವು ಸಮಾಜಕ್ಕೆ ಏನನ್ನು ಕೊಡುತ್ತಿದ್ದೇವೆ ಎಂಬದನ್ನು ಆಲೋಚಿಸುವಂತಾಗಬೇಕು. ಸ್ವಾವಲಂಬಿ ಜೀವನ ಕಂಡು ಕೊಳ್ಳಲು ಇಂತಹ ಶಿಬಿರಗಳು ಉಪಯೋಗ. ಬದುಕನ್ನು ಪರಿವರ್ತನೆ ಮಾಡಿಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸುಶಿಕ್ಷಿತ ಸಮಾಜ ನಿರ್ಮಾಣ ಆಗಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಭಾರತೀಯ ಸಂಸ್ಕøತಿ, ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ರಾಷ್ಟ್ರದ ಯುವಶಕ್ತಿ ಎಲ್ಲೂ ದುರ್ಬಳಕೆ ಆಗದ ರೀತಿಯಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಮಾತನಾಡಿ, ರಾಷ್ಟ್ರೀಯ ಸೇವಾ ಯೊಜನೆಯ ಶಿಬಿರದಲ್ಲಿ ನಾವು ಏನನ್ನು ಕಲಿತಿದ್ದೇವೆ ಎಂಬದನ್ನು ಇತರರಿಗೆ ತಿಳಿಸಿ ಅವರನ್ನು ಪರಿವರ್ತಿಸಿದರೆ ಮಾತ್ರ ಶಿಬಿರದಲ್ಲಿ ಪಾಲ್ಗೊಂಡಿರುವದಕ್ಕೆ ಸಾರ್ಥಕತೆ ಸಿಗುತ್ತದೆ. ಸರ್ಕಾರಿ ಕಾಲೇಜು ಎಂಬ ಕೀಳರಿಮೆ ಸಲ್ಲದು. ಇಂದು ಸರ್ಕಾರಿ ಕಾಲೇಜುಗಳು ಖಾಸಗಿ ಕಾಲೇಜುಗಳ ಸರಿಸಮಾನದಲ್ಲಿದೆ. ಪಠ್ಯದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವದರಿಂದ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಲು ಸಹಕಾರಿಯಾಗುತ್ತದೆ. ಮಾದಕ ವಸ್ತುಗಳಿಗೆ ಆಕರ್ಷಿತರಾಗದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತೆ ಸಲಹೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯೆ ಆಲತಂಡ ಸೀತಮ್ಮ, ಕದನೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಾಳೆಕುಟ್ಟಿರ ಮಂದಣ್ಣ, ಅಮ್ಮಂಡ ಸುಬ್ಬಯ್ಯ, ಪತ್ರಕರ್ತ ಪಳೆಯಂಡ ಪಾರ್ಥ ಚಿಣ್ಣಪ್ಪ, ಚಪ್ಪಂಡ ಸೋಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ವನೀತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಶಿಬಿರಾಧಿಕಾರಿ ಪ್ರೊ. ನಾಗರಾಜ್ ಸ್ವಾಗತಿಸಿದರು. ಶಿಬಿತಾರ್ಥಿ ವಿನುತಾ ವಂದಿಸಿದರು.