ಸುಂಟಿಕೊಪ್ಪ, ಜ. 16: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಅಭಿಮಾನಿಯೊಬ್ಬರ ಪಕ್ಷ ನಿಷ್ಠೆಯ ಮಾತಿನಿಂದ ಮುಜುಗರಕ್ಕೆ ಒಳಗಾದ ನಾಯಕರೊಬ್ಬರ ಬೆಂಬಲಿಗರು ಹಲ್ಲೆಗೆ ಮುಂದಾದಾಗ, ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ಜನಪ್ರತಿನಿಧಿಯೊಬ್ಬರಿಗೆ ಕೈ ಮಿಲಾಯಿಸಿದ ಘಟನೆ ನಡೆದಿದೆ.

ಇಲ್ಲಿನ ಖತೀಜ ಉಮ್ಮ ಮದರಸದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾದ ಅಪ್ರು ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು.

ಈ ಸಭೆಯಲ್ಲಿ ಗುಡ್ಡೆಹೊಸೂರು ಜಿ.ಪಂ.ಕ್ಷೇತ್ರದ ಸದಸ್ಯ ಪಿ.ಎಂ. ಲತೀಫ್, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಐ. ರಫೀಕ್, ಮಾಜಿ ಗ್ರಾ.ಪಂ. ಅಧ್ಯಕ್ಷ ಎಂ.ಎ. ಉಸ್ಮಾನ್, ನಗರ ಕಾರ್ಯದರ್ಶಿ ಶರೀಫ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾಳೆಯಂಡ ಮಿಟ್ಟು ಪೆಮ್ಮಯ್ಯ, ಕಾಂಗ್ರೆಸ್‍ನ ಪ್ರಮುಖರಾದ ಮುಕ್ಕಾಟಿರ ವಸಂತ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ಇಲ್ಲಿ ಎಲ್ಲಾ ಧರ್ಮ, ಜಾತಿ, ಪಂಗಡ, ಉಪ ಪಂಗಡದವರೂ ಪಕ್ಷಕ್ಕಾಗಿ ಶತಮಾನಗಳಿಂದ ದುಡಿದಿದ್ದಾರೆ ಆದರೆ ಈ ಸಭೆಯಲ್ಲಿ ಕೇವಲ ಒಂದು ವರ್ಗದ ಜನತೆ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವದು ಕಂಡು ಬಂದಿದೆ. ಇತರ ಜನಾಂಗದವರ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂದು ಕಾಂಗ್ರೆಸ್ ಯುವ ಸದಸ್ಯ ಹಕೀಂ ಪ್ರಶ್ನಿಸಿದರು.

ನಗರಾಧ್ಯಕ್ಷ ರಫೀಕ್ ಸಭೆಯಲ್ಲಿ ಮಾತನಾಡುತ್ತಿರುವಾಗ ಕಾಂಗ್ರೆಸ್ ಯುವ ಸದಸ್ಯರುಗಳ ನಡುವೆ ವಾಗ್ವಾದ ನಡೆಯಿತು ಇದಕ್ಕೆ ಜಿ.ಪಂ. ಸದಸ್ಯರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದಾಗ 2 ಗುಂಪಿನ ಸದಸ್ಯರ ನಡುವೆ ವಾಗ್ಯುದ್ಧ ನಡೆದು ಕೈ ಕೈ ಮಿಲಾಯಿಸಿದ್ದಲ್ಲದೆ ಜಿ.ಪಂ. ಸದಸ್ಯರೂ ಬಿಸಿ ಅನುಭವಿಸಿದರು. ಅನಂತರ ಗದ್ದಲದ ನಡುವೆ ಸಭೆ ಬರಕಾಸ್ತುಗೊಂಡಿತು.