ವೀರಾಜಪೇಟೆ, ಜ. 16 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆಯ ಆಯ್ದ ವಿದ್ಯಾಸಂಸ್ಥೆಗಳಿಗೆ ವಿವಿಧ ಲೇಖಕರ ಉಪಯುಕ್ತ ಪುಸ್ತಕಗಳನ್ನು ನೀಡುವ ಯೋಜನೆಯಡಿ ವೀರಾಜಪೇಟೆ ಕಾವೇರಿ ಕಾಲೇಜಿನ ಗ್ರಂಥಾಲಯಕ್ಕೆ 300 ಕ್ಕೂ ಅಧಿಕ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಎಸ್. ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯ ಕ್ರಮವನ್ನು ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ಈ. ಸಿ. ಜೀವನ್ ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಹಲವು ವರ್ಷಗಳಿಂದ ಸಾಹಿತ್ಯವನ್ನು ಬೆಳೆಸುವದರಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸುತಿದ್ದು ಇಂದು ವಿದ್ಯಾಸಂಸ್ಥೆಗಳಿಗೆ ಪುಸ್ತಕ ನೀಡುವದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿಯನ್ನು ಬೆಳೆಸುವಂತಹ ಕಾರ್ಯಕ್ಕೆ ಮುಂದಾಗಿದೆ. ಇದನ್ನು ವಿದ್ಯಾರ್ಥಿ ಗಳು ಬಳಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಅಧಿಕಾರವಧಿಯಲ್ಲಿ ಹೊಸ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ 20 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳಿಗೆ ಕನ್ನಡ, ಕೊಡವ, ಅರೆಭಾಷೆ ಸೇರಿದಂತೆ ಉಪಯುಕ್ತ ಪುಸ್ತಕಗಳನ್ನು ನೀಡುತಿದ್ದೇವೆ. ವಿದ್ಯಾರ್ಥಿಗಳು ಸಾಹಿತ್ಯ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ಯುಗದಲ್ಲಿ ಕನ್ನಡ ಭಾಷೆ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದ್ದರೂ ವಿದ್ಯಾರ್ಥಿಗಳು ಕನ್ನಡವನ್ನು ಬಳಸುವದರ ಮುಖಾಂತರ ಭಾಷೆಯ ಬೆಳವಣಿಗೆಗೆ ಕಾರಣಕರ್ತರಾಗಬೇಕು. ನಾವು ನೀಡುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವದರೊಂದಿಗೆ ಸಾಹಿತ್ಯದ ಸೇವೆಗೆ ಮುಂದಾಗಬೇಕು ಎಂದು ಹೇಳಿದರು. ಮುಂದಿನ ಯೋಜನೆಯಲ್ಲಿ ಗ್ರಂಥಾಲಯ ದಲ್ಲಿರುವ ಪುಸ್ತಕಗಳಿಂದ ಆಯ್ದ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿ ಪರೀಕ್ಷೆ ನಡೆಸುವ ಹೊಸ ಒಂದು ಸ್ಪರ್ಧೆಯನ್ನು ಕೂಡ ಹಮ್ಮಿಕೊಂಡಿ ದ್ದೇವೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಕೂಡ ನೀಡಲಾಗುವದು. ಇದರಿಂದ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಉಪಯೋಗಿಸಲು ಪ್ರೋತ್ಸಾಹ ನೀಡಿದಂತಾಗುವದು ಎಂದರು.

ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ. ಉಷಾಲತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಎಂ. ನಾಣಯ್ಯ, ಕನ್ನಡ ಸಾಹಿತ್ಯ ಪರಿಷತ್ತು ವೀರಾಜಪೇಟೆ ತಾಲೂಕಿನ ಅಧ್ಯಕ್ಷ ಮಧೋಶ್ ಪೂವಯ್ಯ ಉಪಸ್ಥಿತರಿದ್ದರು. ಮುಲ್ಲೇಂಗಡ ರೇವತಿ ಪೂವಯ್ಯ ಹಾಗೂ ಅಮ್ಮುಣಿಚಂಡ ಪ್ರವೀಣ್ ಚಂಗಪ್ಪ ಇವರಿಂದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ನಿರ್ದೇಶಕ ಡಾ. ನೆರವಂಡ ದೇಚಮ್ಮ ವಂದನಾರ್ಪಣೆ ಮಾಡಿದರು. ಕಾಲೇಜಿನ ವಿದ್ಯಾರ್ಥಿ ಗಳು ಕಾರ್ಯಕ್ರಮ ನಿರೂಪಿಸಿದರು.