ಕುಶಾಲನಗರ, ಜ. 16: ಕಾಡಾನೆಯೊಂದು ಅರಣ್ಯ ಸಿಬ್ಬಂದಿಗೆ ಧಾಳಿ ಮಾಡಿದ ಪರಿಣಾಮ ಸಿಬ್ಬಂದಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಕುಶಾಲನಗರ ಸಮೀಪ ಅತ್ತೂರು ವಲಯದಲ್ಲಿ ನಡೆದಿದೆ. ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಪೊನ್ನಪ್ಪ (44) ಎಂಬವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರಾಜ್ಯ ಹೆದ್ದಾರಿಯಿಂದ ಅಂದಾಜು 3 ಕಿಮೀ ದೂರದ ಅರಣ್ಯದಲ್ಲಿ ಹುಲಿ ಸಂತತಿ ಗಣತಿ ಕಾರ್ಯಕ್ಕೆ ಪೂರ್ವಸಿದ್ದತೆ ನಡೆಸುತ್ತಿದ್ದ ಸಂದರ್ಭ ಆನೆ ಧಾಳಿ ಮಾಡಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪೊನ್ನಪ್ಪ ತನ್ನ ಸಹಚರ ರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾಗ ಆನೆ ಧಾಳಿ ಮಾಡಿದೆ. ತಕ್ಷಣ ಜೊತೆ ಗಾರರು ಕಿರುಚಿಕೊಂಡ ಸಂದರ್ಭ ಆನೆ ತುಳಿದು ಮುಂದೆ ಸಾಗಿದೆ ಎಂದು ಉಪ ಅರಣ್ಯ ವಲಯಾಧಿಕಾರಿ ಬಾನಂಡ ದೇವಿಪ್ರಸಾದ್ ತಿಳಿಸಿದ್ದಾರೆ.

ಕೂಡಲೇ ಗಾಯಾಳುವನ್ನು ಇನ್ನೋರ್ವ ಉಪ ಅರಣ್ಯ ವಲಯಾಧಿಕಾರಿ ಅನಿಲ್ ಡಿಸೋಜ, ಸಿಬ್ಬಂದಿಗಳಾದ ಮಂಜೇಗೌಡ, ಪೂಣಚ್ಚ ಮತ್ತಿತರರು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಗೆ ಸಾಗಿಸಲಾಗಿದೆ.

ಗಾಯಾಳು ಪೊನ್ನಪ್ಪ ತಲೆ ಭಾಗ, ಬಲಗಾಲಿಗೆ ಆನೆ ತುಳಿದು ಗಾಯ ಉಂಟಾಗಿದೆ.