ಸೋಮವಾರಪೇಟೆ, ಜ. 16: ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 59ನೇ ವರ್ಷದ ವಾರ್ಷಿಕ ಮಹಾರಥೋತ್ಸವ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ವೈಭವಯುತವಾಗಿ ನೆರವೇರಿತು.
ಸುಮಾರು 800ಕ್ಕೂ ಅಧಿಕ ವರ್ಷಗಳ ಹಿಂದಿನ ಇತಿಹಾಸ ಹೊಂದಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 59ನೇ ವರ್ಷದ ಮಹಾ ರಥೋತ್ಸವಕ್ಕೆ ಕೊಡಗು ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಸಹಸ್ರಾರು ಮಂದಿ ಭಕ್ತರು ಆಗಮಿಸಿ ವಿವಿಧ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಶಾಂತಳ್ಳಿ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಜರುಗುವ ಜಾತ್ರೆ ಹಾಗೂ ರಥೋತ್ಸವ ಈ ಬಾರಿಯೂ ವೈಭವಯುತವಾಗಿ ನೆರವೇರಿತು. ಚಂಡೆವಾದ್ಯ, ನಾದಸ್ವರದೊಂದಿಗೆ ಗ್ರಾಮದ ರಥಬೀದಿಯಲ್ಲಿ ಶ್ರೀ ಕುಮಾರಲಿಂಗೇಶ್ವರ ದೇವರ ಮೆರವಣಿಗೆ ನಡೆಸಲಾಯಿತು. ಕಳೆದ ತಾ. 13ರ ಬೆಳ್ಳಿ ಬಂಗಾರ ದಿನದಂದು ಪ್ರಾರ್ಥನಾ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆಗೊಂಡಿರುವ ಪ್ರಸಕ್ತ ವರ್ಷದ ಜಾತ್ರೆಗೆ ತಾ. 17 ರಂದು (ಇಂದು) ತೆರೆಬೀಳಲಿದೆ. ಜಾತ್ರೆ ಪ್ರಯುಕ್ತ ದೇವಾಲಯದಲ್ಲಿ ಕರುವಿನ ಹಬ್ಬ, ಗರುಡಗಂಬದಲ್ಲಿ ತುಪ್ಪದ ನಂದಾದೀಪ ಬೆಳಗುವದು,
(ಮೊದಲ ಪುಟದಿಂದ) ಪುಷ್ಪಗಿರಿ ಬೆಟ್ಟದಲ್ಲಿರುವ ಪುರಾತನ ದೇವಾಲಯದಲ್ಲಿ ದೀಪೋತ್ಸವ,ಅರಸುಬಲ ಸೇವೆ ಸೇರಿದಂತೆ ಪ್ರತಿದಿನ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದ್ದು, ಇಂದು ಮಹಾರಥೋತ್ಸವ ವಿಜ್ರಂಭಣೆ ಯೊಂದಿಗೆ ಶ್ರದ್ಧಾಭಕ್ತಿಯಲ್ಲಿ ಜರುಗಿತು.
ವೇದಮೂರ್ತಿ ಶಿಬರೂರು ಗೋಪಾಲಕೃಷ್ಣ ಹಾಗೂ ದೇವಾಲಯದ ಪ್ರಧಾನ ಅರ್ಚಕ ರಮೇಶ್ ಹೆಗಡೆ ನೇತೃತ್ವದ ತಂಡದವರಿಂದ ಬೆಳಗ್ಗಿನಿಂದಲೇ ಪೂಜಾ ವಿಧಿವಿಧಾನಗಳು ನಡೆದವು. ನಿರಂತರವಾಗಿ ಅನಾದಿಕಾಲ ದಿಂದಲೂ ನಡೆದು ಬಂದ ಪದ್ದತಿಯ ಮೇರೆ ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರ ಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಾಂತಳ್ಳಿಯ ರಥಬೀದಿಯಲ್ಲಿ ಹೊರಟ ರಥವನ್ನು ಭಕ್ತಾದಿಗಳು ದಾರಿಯ ಇಕ್ಕೆಲಗಳಲ್ಲೂ ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಜಿ.ಎಸ್. ರಘುಕುಮಾರ್, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಕೆ. ಪರಮೇಶ, ಖಜಾಂಚಿ ಡಿ.ಎಸ್. ಲಿಂಗರಾಜು, ಸಹ ಕಾರ್ಯದರ್ಶಿ ದಿವ್ಯಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಚಂಗಪ್ಪ, ಧರ್ಮದರ್ಶಿಗಳಾದ ಕೆ.ಬಿ. ಜೋಯಪ್ಪ, ಕೆ.ಟಿ. ಮಧುಕುಮಾರ್, ಕೆ.ಎಸ್. ಚಂದ್ರಾವತಿ, ಎಸ್.ಎ. ಪ್ರತಾಪ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹೊರಜಿಲ್ಲೆಯ ನೂರಾರು ಮಂದಿ ಭಕ್ತಾದಿಗಳು ವಿಶೇಷ ಮಡಿವಂತಿಕೆಯಿಂದ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ದಾನಿಗಳಾದ ಬೆಂಗಳೂರಿನ ಚಂದ್ರಕಲಾ ರಾಮಚಂದ್ರ, ಹರಪಳ್ಳಿಯ ನಯನ ರವೀಂದ್ರ ಸೇರಿದಂತೆ ಇತರರ ಆರ್ಥಿಕ ನೆರವಿನೊಂದಿಗೆ ಮಧ್ಯಾಹ್ನ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಸಂಜೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ತಾ. 17 ರಂದು (ಇಂದು) ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬೀಳಲಿದೆ.
ಜಾತ್ರೋತ್ಸವದ ಅಂಗವಾಗಿ ತಾಲೂಕಿನ ಕೃಷಿ ಇಲಾಖೆ, ತೋಟಗಾರಿಕೆ, ಸಂಬಾರ ಮಂಡಳಿ ವತಿಯಿಂದ ರೈತರು ಬೆಳೆದ ಬೆಳೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಥಳೀಯ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಅಂತರ ಜಿಲ್ಲಾ ಮಟ್ಟದ ಪುರುಷರ ಮುಕ್ತ ಕಬಡ್ಡಿ ಮತ್ತು ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದವು. ಹೊರ ಜಿಲ್ಲೆಯ ನೂರಾರು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಚೋಳರ ಕಾಲದ ದೇವಾಲಯ: ಕುಮಾರಲಿಂಗೇಶ್ವರ ದೇವಾಲಯವು ಚೋಳ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು ಸಂಪೂರ್ಣವಾಗಿ ಬೃಹತ್ ಕಲ್ಲುಗಳ ಜೋಡಣೆಯಿದೆ. ಶ್ರೀ ಕ್ಷೇತ್ರವು ಸೋಮವಾರಪೇಟೆ ನಗರದಿಂದ 10 ಕಿ.ಮಿ. ದೂರದಲ್ಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರುವ ಪುಷ್ಪಗಿರಿ ಸಮೀಪದ ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಮಾರ್ಗಮಧ್ಯೆ ಶ್ರೀಕುಮಾರಲಿಂಗೇಶ್ವರ ದೇವಾಲಯ ನೆಲೆಯಾಗಿದೆ. ಕಳೆದ 6 ದಶಕಗಳಿಂದ ಪ್ರತಿ ವರ್ಷ ಮಕರ ಸಂಕ್ರಾಂತಿಯ ಸಂದರ್ಭ ದೇವಾಲಯದಲ್ಲಿ ರಥೋತ್ಸವ ಹಾಗೂ 1 ವಾರಗಳ ತನಕ ಧಾರ್ಮಿಕ ವಿಧಿ ವಿಧಾನಗಳಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತವೆ. ಸಾವಿರಾರು ಮಂದಿ ಭಕ್ತಾದಿಗಳು ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿ ಫಲ ತಾಂಬೂಲ, ದವಸ ಧಾನ್ಯ, ಕಾಣಿಕೆ, ಹರಕೆಗಳನ್ನು ಸಲ್ಲಿಸುತ್ತಾರೆ. -ವಿಜಯ್ ಹಾನಗಲ್