ವರದಿ : ಟಿ. ಎಲ್. ಶ್ರೀನಿವಾಸ್ಬೆಂ ಗಳೂರು, ಜ.16: ಜಗತ್ತಿನ ಶ್ರೀಮಂತ ವಾಣಿಜ್ಯ ಬೆಳೆ ಕಾಫಿಯ ಬಗ್ಗೆ ಅಲ್ಲಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಆದರೆ, ಕಾಫಿ ಬೆಳೆಯುವ ನಮ್ಮ ಹೆಚ್ಚಿನ ಬೆಳೆಗಾರರಿಗೆ ಕಾಫಿ ವಿಸ್ಮಯ ಪ್ರಪಂಚ ಇನ್ನೂ ಅಷ್ಟಾಗಿ ಪರಿಚಿತವಾಗಿಲ್ಲ. ಕಾಫಿಯ ದರ ಕುಸಿತ, ಕಾರ್ಮಿಕರ ಕೊರತೆ, ತೋಟ ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ, ರಸಗೊಬ್ಬರ ಬಳಕೆ ಇತ್ಯಾದಿ ಬಗ್ಗೆಯೇ ಅಧಿಕವಾಗಿ ತಲೆಕೆಡಿಸಿಕೊಳ್ಳುವ ಕಾಫಿ ಕೃಷಿಕರಿಗೆ ಸ್ವಾದಿಷ್ಟ ಹಾಗೂ ಆರೋಗ್ಯಪೂರ್ಣ ಕಾಫಿ ತಯಾರಿ ಬಗ್ಗೆ ಗೊತ್ತೇ ಇಲ್ಲ ಎನ್ನಬಹುದು. ಒಂದೇ ನಮೂನೆಯ ಕಾಫಿ ಬೀಜದಿಂದ ಹಲವು ಬಗೆಯ ರುಚಿಕರ ಕಾಫಿ ತಯಾರಿ ಬಗ್ಗೆ ಇಂದು ಬೆಂಗಳೂರಿನಲ್ಲಿ ಆರಂಭಗೊಂಡ 7ನೇ ಭಾರತ ಅಂತರ್ರಾಷ್ಟ್ರೀಯ ಕಾಫಿ ಹಬ್ಬದಲ್ಲಿ ವಿವಿಧ ರೋಸ್ಟಿಂಗ್ ಯಂತ್ರೋಪಕರಣ ಕಂಪೆನಿಗಳ ವಿಷಯ ತಜ್ಞರಿಂದ ಆಸಕ್ತಿಕರ ಕಾಫಿ ಕಾರ್ಯಾಗಾರ ನಡೆಯಿತು.
ಇಂಡಿಯಾ ಕಾಫಿ ಟ್ರಸ್ಟ್, ಭಾರತೀಯ ಕಾಫಿ ಮಂಡಳಿ, ಟಾಟಾ ಕಾಫಿ ಸಂಸ್ಥೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಬ್ರೂ, ನೆಸ್ಕೆಫೆ ಇತ್ಯಾದಿ ಕಂಪೆನಿಗಳ ಸಹಭಾಗಿತ್ವದಲ್ಲಿ ಇಲ್ಲಿನ ಲಲಿತ್ ಅಶೋಕ್ ಹೊಟೇಲ್ನಲ್ಲಿ ಇಂದು ಆರಂಭಗೊಂಡ ಕಾಫಿ ಹಬ್ಬದಲ್ಲಿ ಕಾಫಿ ತಯಾರಿಯ ವಿವಿಧ ವಿಧಾನದ ಮೂರು ಕಾರ್ಯಾಗಾರಗಳು ನಡೆದವು.
ಸುಮಾರು 150 ವರ್ಷ ಇತಿಹಾಸವಿರುವ ಜರ್ಮನಿಯ ಪೆÇ್ರಬೆಟ್ ಕಂಪೆನಿ, ಬೂಹ್ಲರ್ ಕಂಪೆನಿ ಹಾಗೂ ಲಿಲ್ಲಾ ರೋಸ್ಟರ್ಸ್ ಕಂಪೆನಿಯ ಪ್ರಮುಖರು ಕಾಫಿ ರೋಸ್ಟಿಂಗ್ ಪದ್ಧತಿಯ ಹೊಸಾ ಆವಿಷ್ಕಾರದ ಬಗ್ಗೆ ಬೆಳಕು ಚೆಲ್ಲಿದರು. ಪ್ರಮುಖವಾಗಿ ರೋಸ್ಟಿಂಗ್ ಸಂದರ್ಭ ಕಾಫಿ ಬೀಜದಲ್ಲಿರುವ ಆಮ್ಲೀಯ ಗುಣವನ್ನು ಹೊರಹಾಕುವದು, ಕಾಫಿ ಹುರಿಯುವ ಸಂದರ್ಭ ಹೊರಸೂಸುವ ಇಂಗಾಲಾಮ್ಲ (ಕಾರ್ಬನ್ ಡೈ ಆಕೈಡ್)ವನ್ನು ಹೊರಹಾಕುವದು, ಪರಿಮಳ ಹೆಚ್ಚಿಸುವದು, ಸ್ವಾದಿಷ್ಟಕರವಾಗಿರಲು ಕಹಿ ಮತ್ತು ಹುಳಿಯನ್ನು ಹತೋಟಿಯಲ್ಲಿಡುವದು ಇತ್ಯಾದಿ ವಿಧಾನದ ಬಗ್ಗೆ ಜರ್ಮನಿಯ ಮಾರ್ಷಲ್ ನಿಟ್ಟರ್, ಡಾ. ಸ್ಟೀಫನ್ ಶಂಕರ್, ಫರ್ನಾಂಡೋ ಪರ್ನಾಂಡೀಸ್, ಮಡಿಕೇರಿಯ ರಾಮ್ ಚೇತನ್, ಇಂಡಿಯಾ ಕಾಫಿ ಟ್ರಸ್ಟ್ ಕಾಫಿ ಲ್ಯಾಬ್ನ ಮುಖ್ಯಸ್ಥೆ ಸುನಾಲಿನಿ ಮೆನನ್ ಮುಂತಾದವರು ಉಪಯುಕ್ತ ಮಾಹಿತಿ ನೀಡಿದರು.
ಕಾಫಿ ರೋಸ್ಟಿಂಗ್ ಯಂತ್ರದ ಮೂಲಕ ಸುಮಾರು 210 ಡಿಗ್ರಿ ಉಷ್ಣಾಂಶ, ಗರಿಷ್ಠ 225 ಡಿಗ್ರಿ ಉಷ್ಣಾಂಶದಲ್ಲಿ ಕಾಫಿ ಬೀಜವನ್ನು ಹದಗೊಳಿಸಿ ರುಚಿಕರ ಕಾಫಿ ತಯಾರಿ ವಿಧಾನವನ್ನು ವಿವರಿಸಲಾಯಿತಲ್ಲದೆ, ಪ್ರಾತ್ಯಕ್ಷಿಕೆ ಮೂಲಕ ಕಾಫಿ ಬೀಜದಿಂದ ಸುಮಾರು 4 ವಿಧದ ರುಚಿಕರ ಕಾಫಿಯನ್ನು ತಯಾರಿಸಿ, ಪ್ರತಿನಿಧಿಗಳಿಗೆ ಸವಿಯಲು ನೀಡಲಾಯಿತು.
ಪ್ರಮುಖವಾಗಿ ಕೆಫೆ ಕಾಫಿ ಡೇ, ಕಾಫಿ ಪಬ್, ಕಾಫಿ ಕೆಫ್ಟೇರಿಯಾಗಳಲ್ಲಿ ಇತರ ಕಾಫಿ ಮಳಿಗೆಗಳಲ್ಲಿ ಕಾಫಿ ರೋಸ್ಟಿಂಗ್ ಯಂತ್ರಗಳನ್ನು ಬಳಸಿ ಹೇಗೆ ಒಂದೇ ರುಚಿಯನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬ ಬಗ್ಗೆ ವಿವರಿಸಲಾಯಿತು. ವಿದೇಶಗಳಲ್ಲಿ ಕಾಫಿಯ ‘ಕಪ್ ಟೆಸ್ಟ್’ ನೋಡಿಕೊಂಡು, ಗುಣಮಟ್ಟದ ಸ್ಪೆಷಾಲಿಟಿ ಕಾಫಿಯನ್ನು ಕುಡಿಯುವ ಪರಿಪಾಠವಿದೆ.
(ಮೊದಲ ಪುಟದಿಂದ) ಭಾರತದ ಪ್ರಮುಖ ನಗರಗಳಲ್ಲಿಯೂ ಕಾಫಿ ಸೇವನೆ ಬಗ್ಗೆ ಅಧಿಕ ಪ್ರಚಾರ ಇದೀಗ ನಡೆಯುತ್ತಿದೆ. ಕಾಫಿಯಲ್ಲಿ ಚಾಕೋಲೇಟ್ ಇತ್ಯಾದಿ ಪರಿಮಳ ಬೀರುವಂತೆ ಅಭಿವೃದ್ಧಿ ಪಡಿಸಿರುವ ರೋಸ್ಟಿಂಗ್ ವಿಧಾನವನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಯಿತು.
ವಿದೇಶಗಳಲ್ಲಿ ‘ಎಸ್ಟೇಟ್ ಬ್ರಾಂಡೆಡ್ ಸ್ಪೆಷಾಲಿಟಿ ಕಾಫಿ’ ಬಗ್ಗೆ ಅಧಿಕ ಒಲವು ವ್ಯಕ್ತವಾಗುತ್ತಿದ್ದು ಕೆ.ಜಿ.ಕಾಫಿಗೆ ರೂ.1000 ದರ ಲಭ್ಯವಾಗಲೂ ಸಾಧ್ಯವಿದೆ. ಕಾಫಿ ತೋಟದಲ್ಲಿನ ಕಾಫಿ ಕೃಷಿಯ ಗುಣಮಟ್ಟ ಕಾಪಾಡಿಕೊಳ್ಳುವದು, ಒಂದೇ ತೆರನಾದ ರುಚಿ, ಪರಿಮಳವನ್ನು ಶಾಶ್ವತವಾಗಿ ಕಾಪಾಡಿಕೊಳ್ಳುವ ವಿಧಾನದ ಬಗ್ಗೆಯೂ ಇಂದು ಪ್ರತಿನಿಧಿಗಳಿಗೆ ಉಪಯುಕ್ತ ಮಾಹಿತಿ ನೀಡಲಾಯಿತು. ವಿಶ್ವಮಟ್ಟದಲ್ಲಿ ತೋಟ ಮಾಲೀಕರು ತಮ್ಮದೇ ಕಾಫಿಯನ್ನು ನೇರವಾಗಿ ಮಾರಾಟಮಾಡಲು ಅವಕಾಶವಿದೆ. ಸುಮಾರು 150 ವರ್ಷ ಇತಿಹಾಸವಿರುವ ಪೆÇ್ರಬಟ್ ಕಾಫಿ ರೋಸ್ಟಿಂಗ್ ಯಂತ್ರೋಪಕರಣ ನಿರ್ಮಾಣ ಕಂಪೆನಿ ಲಕ್ಷಕ್ಕೂ ಅಧಿಕ ರೋಸ್ಟಿಂಗ್ ಯಂತ್ರಗಳನ್ನು 60ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದು ಶೇ.75 ರಷ್ಟು ಸಾಧನೆ ಮಾಡಿದೆ ಎನ್ನಲಾಗುತ್ತಿದೆ.
80 ಗ್ರಾಂ, 100 ಗ್ರಾಂ, 5 ಕೆ.ಜಿ. ಕಾಫಿ ಬೀಜವನ್ನು ಹುರಿಯುವ ಯಂತ್ರದಿಂದ ಸುಮಾರು 460 ಕೆ.ಜಿ.ಕಾಫಿ ಬೀಜವನ್ನು ಏಕಕಾಲದಲ್ಲಿ ‘ರೋಸ್ಟ್’ ಮಾಡುವ ಹೊಸ ಹೊಸ ಯಂತ್ರೋಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ರೂ.14 ಲಕ್ಷ ಮುಖಬೆಲೆಯಿಂದ ರೂ. 20 ಕೋಟಿಯವರೆಗೂ ಬೆಲೆಬಾಳುವ ಅತ್ಯಾಧುನಿಕ ಶೈಲಿಯ ಕಾಫಿ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಪೆÇ್ರಬಟ್ ಸಂಸ್ಥೆಯ ರಾಮ್ ಚೇತನ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ರೋಸ್ಟಿಂಗ್ ಸಂದರ್ಭ ಕಾಫಿ ಬೀಜದ ಒಳಗಿನ ರಾಸಾಯನಿಕ ಹಾಗೂ ಭೌತಿಕ ಬದಲಾವಣೆಯ ಕುರಿತೂ ಕಾಫಿ ವಿಷಯ ತಜ್ಞರು ಮಾಹಿತಿ ನೀಡಿದ್ದು ವಿಶೇಷವಾಗಿತ್ತು.
ಭಾರತದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಿದಲ್ಲಿ ಭಾರತದ ಕಾಫಿ ಬೆಳೆಗಾರರಿಗೆ ಉತ್ತಮ ದರ ಲಭ್ಯವಾಗಲೂ ಸಾಧ್ಯ. ವಿಶ್ವದ ಕಾಫಿ ಬೆಳೆಯುವ ರಾಷ್ಟ್ರಗಳ ಪ್ರತಿನಿಧಿಗಳು, ಉದ್ಯಮಿಗಳು ಕಾಫಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಭಾರತದ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಲಭ್ಯವಾಗಲು ವಿಶೇಷ ಪ್ರಯತ್ನ ಮಾಡಲಾಗಿದೆ ಎಂದು ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ವಾಣಿಜ್ಯ ಸಚಿವರಿಂದ ಉದ್ಘಾಟನೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾಫಿ ಹಬ್ಬದಲ್ಲಿ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲದೆ ನವದೆಹಲಿ, ಮುಂಬೈ, ಕೇರಳ, ಸೇಲಂ, ಚೆನ್ನೈ ಮುಂತಾದ ಪ್ರದೇಶಗಳಿಂದಲೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ತಾ. 17ರಂದು (ಇಂದು) ಸಂಜೆ 5 ಗಂಟೆಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ಕಾಫಿ ಹಬ್ಬ ಹಾಗೂ ಕಾಫಿ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಒಳಗೊಂಡಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ತಾ.17 ರಂದು ಇಲ್ಲಿನ ಗಾಲ್ಫ್ ಮೈದಾನದಲ್ಲಿ ಕಾಫಿ ಗಾಲ್ಫ್ ಪಂದ್ಯಾಟ ನಡೆಯಲಿದೆ ಹಾಗೂ ಮೂರು ವಿಶಿಷ್ಟ ಕಾರ್ಯಾಗಾರಗಳೂ ನಡೆಯಲಿದೆ.