ಗೋಣಿಕೊಪ್ಪ ವರದಿ, ಜ. 17: ಬೋರ್ವೆಲ್ ಕೊರೆಸಲು ಸರ್ಕಾರಿ ಎಜೆನ್ಸಿಗಳು ವೀರಾಜಪೇಟೆ ತಾಲೂಕು ವ್ಯಾಪ್ತಿಗೆ ಬರಲು ಹಿಂದೇಟು ಹಾಕುತ್ತಿರುವದರಿಂದ ಬೋರ್ವೆಲ್ ಕಾಮಗಾರಿ ಪ್ರಗತಿಯಲ್ಲಿ ಕುಂಟಿತವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿ ಹೇಳಿದರು.
ಪೊನ್ನಂಪೇಟೆ ಸಾಮಥ್ರ್ಯ ಸೌಧದಲ್ಲಿ ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ಪ್ರಗತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಬರ ಪರಿಹಾರ ಯೋಜನೆ ಸೇರಿದಂತೆ ಸಾಕಷ್ಟು ನೀರು ಸರಬರಾಜು ಯೋಜನೆಗಳು ಅನುಷ್ಠಾನದಲ್ಲಿ ಪ್ರಗತಿ ಕುಂಠಿತವಾಗಿದೆ. ಸರ್ಕಾರಿ ಏಜೆನ್ಸಿಗಳು ವೀರಾಜಪೇಟೆ ತಾಲೂಕಿನಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿರುವದು ಪ್ರಮುಖ ಕಾರಣವಾಗಿದೆ. ಸೋಮವಾರಪೇಟೆ ತಾಲೂಕಿನ ಏಜೆನ್ಸಿ ಬಳಕೆ ಮಾಡಿಕೊಂಡು ಯೋಜನೆ ಪೂರೈಸಲಾಗುವದು ಎಂದು ಹೇಳಿದರು.
ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಸಿಆರ್ಪಿ, ಬಿ.ಆರ್ಪಿ ಗಳಾಗಿ ಕಾರ್ಯನಿರ್ವಹಿಸುತ್ತಿರುವ ಕೆಲವೊಂದು ಸಿಬ್ಬಂದಿ ವಿವಿಧ ಪಕ್ಷಗಳ ಮುಖಂಡರೊಂದಿಗೆ ದಿನ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅವರ ದೈನಂದಿನ ಹಾಜರಾತಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಅವರನ್ನು ನಿಯಂತ್ರಿಸಲು ಶಿಕ್ಷಣ ಉಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಶೇ. 80 ರಷ್ಟು ಫಲಿತಾಂಶ ನಿರೀಕ್ಷೆ: ಶೈಕ್ಷಣಿಕ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ವೀರಾಜಪೇಟೆ ತಾಲೂಕಿನಲ್ಲಿ ಶೇ. 80 ರಷ್ಟು ಫಲಿತಾಂಶದ ಪ್ರಗತಿ ನಿರೀಕ್ಷೆ ಹೊಂದಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು. ಎಸ್ಎಸ್ಎಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು 7 ತಲಾ 3 ಅಧಿಕಾರಿಗಳ 8 ತಂಡ ರಚಿಸಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಶಾಲೆ ಬಿಟ್ಟ 6 ವಿದ್ಯಾರ್ಥಿಗಳನ್ನು ಗುರುತಿಸಿ ಮರಳಿ ಶಾಲೆಗೆ ಸೇರಿಸಲಾಗಿದೆ. ಅತಿಥಿ ಶಿಕ್ಷಕರ ವೇತನವನ್ನು ಶೀಘ್ರವಾಗಿ ಬಿಡುಗಡೆಗೊಳಿಸಲಾಗುವದು ಎಂದು ಮಾಹಿತಿ ನೀಡಿದರು.
ಅರ್ವತ್ತೋಕ್ಲು ನ್ಯಾಯಬೆಲೆ ಅಂಗಡಿಯಲ್ಲಿ ಹೆಚ್ಚಿನ ದರಕ್ಕೆ ಪಡಿತರ ವಿತರಣೆಯಾಗುತ್ತಿಲ್ಲ. ಈ ಬಗ್ಗೆ ಗ್ರಾಮಸ್ಥರೇ ಸ್ಪಷ್ಠಪಡಿಸಿದ್ದಾರೆ ಎಂದು ಆಹಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಕೃಷಿ ಇಲಾಖೆ ವತಿಯಿಂದ ಶೇ. 50 ರಿಯಾಯಿತಿ ದರದಲ್ಲಿ ಸಸ್ಯ ಸಂರಕ್ಷಣಾ ಪೀಡೆನಾಶಕ ವಿತರಣೆಯಲ್ಲಿ ಶೇ. 100 ಪ್ರಗತಿ ಸಾಧಿಸಲಾಗಿದೆ. ಶೇ. 50 ರಿಯಾಯಿತಿ ದರದಲ್ಲಿ ಕೈಚಾಲಿತ ಸಸ್ಯ ಸಂರಕ್ಷಣಾ ಉಪಕರಣ ವಿತರಿಸಲಾಗುತ್ತಿದೆ. ಶೇ. 90 ರಿಯಾಯಿತಿ ದರದಲ್ಲಿ ಡೀಸೆಲ್ ಪಂಪ್ ಸೆಟ್ ಹಾಗೂ ಟಾರ್ಪಲಿನ್ ವಿತರಿಸಲಾಗುವದು ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಜನವರಿ 28 ಹಾಗೂ ಮಾರ್ಚ್ 11 ರಂದು ನಡೆಯುವ ಪೋಲಿಯೋ ಲಸಿಕಾ ಕಾರ್ಯಕ್ರಮನ್ನು ಯಶಸ್ವಿಗೆ ಎಲ್ಲಾ ಇಲಾಖೆಗಳ ಸಹಕಾರ ಅಗತ್ಯವಿದೆ. ಸುಮಾರು 390 ಸಿಬ್ಬಂದಿ ಲಸಿಕೆ ನೀಡಲು ಬಳಸಿಕೊಳ್ಳ ಲಾಗುವದು. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆನೆಚೌಕೂರು ಗೇಟ್ ಬಳಿ ವಿಶೇಷ ಪೋಲಿಯೋ ಬೂತ್ ಸ್ಥಾಪಿಸಲಾಗುವದು ಎಂದು ಹೇಳಿದರು.
ಸಭೆಗೆ ಗೈರಾಗುತ್ತಿರುವ ಅಧಿಕಾರಿಗಳ ವಿರುದ್ಧ ಪತ್ರ ಬರೆಯುವಂತೆ ಆಗ್ರಹಿಸಲಾಯಿತು. ಕಂದಾಯ ಇಲಾಖೆಯಿಂದ ಪ್ರಗತಿಪರ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಕಡತ ವಿಲೇವಾರಿ ಬಗ್ಗೆ ಗೊಂದಲ ನಿವರಣೆಯಾಗುತ್ತಿಲ್ಲ ಎಂದು ನೆಲ್ಲೀರ ಚಲನ್ ಅಸಮಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ. ಗಣೇಶ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಉಪಸ್ಥಿತರಿದ್ದರು.