ಸಿದ್ದಾಪುರ, ಜ. 17: ಕಳೆದ 3 ವರ್ಷಗಳ ಹಿಂದೆ ಕಾಡಾನೆ ಧಾಳಿಗೆ ಸಿಲುಕಿ ಅಂಗವೈಫಲ್ಯತೆಯಿಂದ ಬಳಲುತ್ತಿರುವ ವೃದ್ಧ ಕಾರ್ಮಿಕ ಮಹಿಳೆ ಲಕ್ಷ್ಮಿಗೆ ಕೂಡಲೇ ಪರಿಹಾರವನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ಪರಿಹಾರ ನೀಡದಿದ್ದಲ್ಲಿ ಮಡಿಕೇರಿಯ ಅರಣ್ಯ ಭವನದ ಎದುರು ಜೆ.ಡಿ.ಎಸ್. ಪಕ್ಷದ ವತಿಯಿಂದ ಪ್ರತಿಭಟನೆ ನಡೆಸ ಲಾಗುವದೆಂದು ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಎಚ್ಚರಿಸಿದ್ದಾರೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ಯ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಮಟ್ಟದಲ್ಲಿ ವಾಸವಿರುವ ಕಾಡಾನೆ ಧಾಳಿಗೆ ಸಿಲುಕಿ ಅಂಗವೈಫಲ್ಯತೆಯಿಂದ ಬಳಲುತ್ತಿರುವ ವೃದ್ಧ ಮಹಿಳೆ ಲಕ್ಷ್ಮಿಯ ನಿವಾಸಕ್ಕೆ ಭೇಟಿ ನೀಡಿ ವೈಯಕ್ತಿಕ ರೂ. 10,000ವನ್ನು ನೀಡಿದ ಸಂಕೇತ್ ಪೂವಯ್ಯ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 3 ವರ್ಷಗಳ ಹಿಂದೆ ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಡಾನೆ ಧಾಳಿಗೆ ಸಿಲುಕಿ ಗಂಭೀರ ಗಾಯಗೊಂಡು ಶಾಶ್ವತ ಅಂಗ ವೈಫಲ್ಯದಿಂದ ಬಳಲುತ್ತಿರುವ ಕಡು ಬಡವ ಕಾರ್ಮಿಕ ಮಹಿಳೆ ಲಕ್ಷ್ಮಿಯ ಚಿಕಿತ್ಸೆಗೆ ಈಗಾಗಲೇ ರೂ. 1.50 ಲಕ್ಷ ವೆಚ್ಚವಾಗಿದ್ದರೂ ಕೂಡ ಅರಣ್ಯ ಇಲಾಖಾಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ವಹಿಸಿ ಈವರೆಗೂ ಪರಿಹಾರ ನೀಡದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅರಣ್ಯ ಇಲಾಖೆ ಕಾರ್ಮಿಕ ಮಹಿಳೆ ಲಕ್ಷ್ಮಿಗೆ ಮುಂದಿನ 10 ದಿನಗಳ ಒಳಗೆ ಪರಿಹಾರವನ್ನು ನೀಡದಿದ್ದಲ್ಲಿ ಜೆ.ಡಿ.ಎಸ್. ಪಕ್ಷದ ವತಿಯಿಂದ ಮಡಿಕೇರಿಯ ಅರಣ್ಯ ಭವನದ ಎದುರು ಹೋರಾಟ ಹಮ್ಮಿಕೊಳ್ಳ ಲಾಗುವದೆಂದು ಎಚ್ಚರಿಕೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಡಾನೆ ಧಾಳಿಗೆ ಸಿಲುಕಿ 38 ಮಂದಿ ಸಾವನ್ನಪ್ಪಿದ್ದು ಬಹುತೇಕ ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿ ದ್ದಾರೆಂದು ವಿಷಾದ ವ್ಯಕ್ತಪಡಿಸಿದರು. ಸರ್ಕಾರವು ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಜೆ.ಡಿ.ಎಸ್. ಪಕ್ಷದ ಮುಖಂಡರುಗಳಾದ ಕೆ.ಸಿ. ನಾಣಯ್ಯ, ಎಸ್.ಹೆಚ್. ಮತೀನ್, ಗೌತಮ್, ಕುಸುಮ್ ಕಾರ್ಯಪ್ಪ, ಸಿ.ಎಲ್. ವಿಶ್ವ, ಮಂಜುನಾಥ್, ಶಿವದಾಸ್, ಜಯಮ್ಮ, ಜಿ.ಬಿ. ಸೋಮಯ್ಯ, ಡಿನಿ, ವಿವೇಕ್, ದೇವರಾಜ್, ರಜಾಕ್, ಸಿ.ಎ. ನಾಜೀರ್, ಇತರರು ಹಾಜರಿದ್ದರು.