ಮಡಿಕೇರಿ, ಜ. 16: ನಗರ ಜೆಡಿಎಸ್ ಯುವ ಘಟಕದ ವತಿಯಿಂದ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ ನೇತೃತ್ವದಲ್ಲಿ ನಗರದ ನೆಹರು ಮಂಟಪದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಜೆಡಿಎಸ್‍ನ ಯುವ ಜನತಾದಳದ ಘಟಕ ಸಂಘಟನೆ ಯಾಗುತ್ತಿದ್ದು, ಜನರಿಗೆ ಜನಪರ ಕಾರ್ಯಗಳಿಂದಲೇ ಹತ್ತಿರವಾಗುವ ಕಾರ್ಯವನ್ನು ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳು ಯುವಜನತೆ ಯನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದು, ಯುವಕರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಇವೆಲ್ಲದರಿಂದ ಜೆಡಿಎಸ್ ಯುವ ಘಟಕ ಹೊರ ಬಂದು ಉತ್ತಮ ಜನಪರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಎಂ.ಬಿ. ಗಣೇಶ್ ಮಾತನಾಡಿ, ನಗರದಲ್ಲಿ ನೆಹರು ಮಂಟಪವಿರುವ ಬಗ್ಗೆ ಯಾರಿಗೂ ತಿಳಿದಿಲ್ಲ. ರಾಜ್ಯ ಸರಕಾರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಅಲ್ಲದೇ ಸಂಬಂಧಿಸಿದ ಇಲಾಖೆ ಕೂಡ ಇದರತ್ತ ಗಮನ ಹರಿಸುತ್ತಿಲ್ಲ. ಮುಂದಿನ ನಗರಸಭೆಯ ಸಭೆಯ ಸಂದರ್ಭ ನೆಹರು ಮಂಟಪವನ್ನು ಉನ್ನತೀಕರಿಸುವ ಬಗ್ಗೆ ಚರ್ಚಿಸಿ ಮಂಟಪದ ಅಭಿವೃದ್ಧಿಯ ಬಗ್ಗೆ ಕ್ರಮ ಕೈಗೊಳ್ಳು ವಂತೆ ಒತ್ತಾಯಿಸಲಾಗುವದು ಎಂದರು.

ಪ್ರವಾಸಿ ಕೇಂದ್ರವಾಗಿದ್ದರೂ ನಿರ್ಲಕ್ಷ್ಯಕ್ಕೊಳಗಾಗಿರುವ ಐತಿಹಾಸಿಕ ಮಂಟಪದ ಸುತ್ತಮುತ್ತಲೂ ಇದ್ದ ಕಾಡುಗಳನ್ನು ಕಡಿದು, ಕಸ ಹಾಗೂ ಮದ್ಯದ ಬಾಟಲಿಗಳನ್ನು ತೆರವು ಗೊಳಿಸುವ ಮೂಲಕ ಸುತ್ತಮುತ್ತಲಿನ ವಾತಾವರಣವನ್ನು ಜೆಡಿಎಸ್ ಯುವ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವ ಜೆಡಿಎಸ್‍ನ ಮಡಿಕೇರಿ ನಗರಾಧ್ಯಕ್ಷ ರವಿಕಿರಣ್ ರೈ, ಮಡಿಕೇರಿ ಘಟಕದ ಪ್ರಧಾನ ಕಾರ್ಯದರ್ಶಿ ಕೊಟ್ಟಕೇರಿಯನ ಅಜಿತ್, ಸಹ ಕಾರ್ಯದರ್ಶಿ ರಿಯಾಜ್ ರಹೀಂ ಹಾಗೂ ಪ್ರಮುಖರಾದ ಲೋಹಿತ್, ಮಾರ್ಟಿನ್, ವಿಲ್‍ಫ್ರೆಡ್, ಎನ್. ರವಿಕುಮಾರ್, ಶಿವದಾಸ್, ಲೀಲಾ ಶೇಷಮ್ಮ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.