ಕುಶಾಲನಗರ, ಜ. 16: ಕಾವೇರಿ ನೀರಾವರಿ ನಿಗಮದ ವತಿಯಿಂದ ಕೈಗೊಂಡಿರುವ ಕುಶಾಲನಗರ-ಹಾರಂಗಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿ ನಾಗರಿಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ರೂ. 70 ಲಕ್ಷ ವೆಚ್ಚದಲ್ಲಿ ಗೋಪಾಲ ಸರ್ಕಲ್ ಬಳಿಯಿಂದ ಹಾರಂಗಿ ನೀರಾವರಿ ಕಛೇರಿ ತನಕ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಡಾಂಬರೀಕರಣಗೊಳಿಸಿ ಒಂದು ದಿನದಲ್ಲಿ ಕಿತ್ತು ಬಂದಿದೆ. ಕೆಲಸ ಸಂಪೂರ್ಣ ಕಳಪೆಯಾಗಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ನಿಗಮದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ರಸ್ತೆಯಲ್ಲಿ ಶಾಮಿಯಾನ ಹಾಕಿದ ಪ್ರತಿಭಟನಾಕಾ ರರು ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಸ್ಥಳಕ್ಕೆ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಂ.ಎನ್. ಚಂದ್ರಕುಮಾರ್, ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಮತ್ತಿತರರು ಭೇಟಿ ಮಾಡಿ ಪ್ರತಿಭಟನಾಕಾರ ರೊಂದಿಗೆ ಚರ್ಚಿಸಿದರು. ಕಾಮಗಾರಿಯ ಉಸ್ತುವಾರಿ ವಹಿಸಿರುವ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಅವರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಕಾಮಗಾರಿಯನ್ನು ವೀಕ್ಷಿಸಿದ ಅಧೀಕ್ಷಕ ಅಭಿಯಂತರ ಎಂ.ಎನ್. ಚಂದ್ರಕುಮಾರ್ ಕಾಮಗಾರಿಯನ್ನು ಗುಣಮಟ್ಟದಲ್ಲಿ ನಿರ್ಮಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ, ಮುಳ್ಳುಸೋಗೆ ಗ್ರಾ.ಪಂ. ಮಾಜಿ ಸದಸ್ಯರಾದ ಹರೀಶ್, ಸದಸ್ಯರಾದ ಎಂ.ಎಸ್.ಶಿವಾನಂದ, ರುದ್ರಾಂಬಿಕೆ, ವೇದಾವತಿ, ಸಂತೋಷ್, ಅರುಣಚಂದ್ರ, ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ರಾಘವೇಂದ್ರ, ಎಂ.ಡಿ.ಕೃಷ್ಣಪ್ಪ, ನಿಡ್ಯಮಲೆ ದಿನೇಶ್, ಪ್ರಕಾಶ್, ನಾಣಿ ಮತ್ತಿತರರು ಇದ್ದರು.