ಕುಶಾಲನಗರ, ಜ. 16: ಕಾವೇರಿ ತಾಲೂಕು ಹೋರಾಟ ಸಮಿತಿ ಸಭೆ ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು. ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ 4 ತಿಂಗಳ ಕಾಲ ಕೈಗೊಂಡ ಹೋರಾಟದ ಬಗ್ಗೆ ಚರ್ಚೆ ನಡೆಯಿತು. ಎರಡೂ ಹೋಬಳಿಗಳ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಹೋರಾಟ ಯಶಸ್ವಿಯಾಗಿ ನಡೆದಿದ್ದು ಮುಖ್ಯಮಂತ್ರಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಗ್ಗೆ ಶಶಿಧರ್ ತಿಳಿಸಿದರು.

ಮುಂದಿನ ಬಜೆಟ್‍ನಲ್ಲಿ ಕಾವೇರಿ ತಾಲೂಕು ರಚನೆ ನಿಟ್ಟಿನಲ್ಲಿ ಸರಕಾರ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಒತ್ತಾಯಿಸಲು ಸದ್ಯದಲ್ಲಿಯೇ ಸಮಿತಿಯ ನಿಯೋಗವೊಂದು ಬೆಂಗಳೂರಿಗೆ ತೆರಳುವದು, ರಾಜತಾಂತ್ರಿಕವಾಗಿ ತಾಲೂಕು ರಚನೆಗೆ ಒತ್ತಡ ಹಾಕುವದು ಅಲ್ಲದೆ ನಿರಂತರವಾಗಿ ತಾಲೂಕು ರಚನೆ ಹೋರಾಟ ಮುಂದುವರೆಸುವದು ಈ ಸಂಬಂಧ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಹೋರಾಟದ ಸಂದರ್ಭ ದಾನಿಗಳು ನೀಡಿದ ಧನಸಹಾಯ, ಖರ್ಚು ವೆಚ್ಚಗಳ ಕುರಿತು ಲೆಕ್ಕಪತ್ರ ಮಂಡಿಸಲಾಯಿತು. ಸಮಿತಿ ಪ್ರಮುಖರಾದ ಎಂ.ವಿ. ನಾರಾಯಣ ಲೆಕ್ಕಪತ್ರ ಮಂಡಿಸಿದರು.

ಸಭೆಯಲ್ಲಿ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಕೆ. ನಾಗೇಂದ್ರ, ಪ್ರಮುಖರಾದ ಅಬ್ದುಲ್ ಖಾದರ್, ಅಬ್ದುಲ್ ಕರೀಂ, ಕೆ.ಎಸ್. ರಾಜಶೇಖರ್, ಮುಸ್ತಾಫ, ಶಶಿಕಾಂತ್ ರೈ, ವಿ.ಎಸ್. ಆನಂದಕುಮಾರ್, ಕೆ.ಎಸ್. ಮಹೇಶ್, ವೆಂಕಟೇಶ್ ಪೂಜಾರಿ ಮತ್ತಿತರರು ಇದ್ದರು.