ಚಿತ್ರ ವರದಿ : ಎ.ಎನ್ ವಾಸು ಸಿದ್ದಾಪುರ, ಜ. 16: ಜಿಲ್ಲೆಯ ಕಾಡಾನೆ ಮಾನವ ಸಂಘರ್ಷದ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು, ಸಿದ್ದಾಪುರದಲ್ಲಿ ಬೆಳೆಗಾರರು, ರೈತರು ಹಾಗೂ ಕಾರ್ಮಿಕ ಮುಖಂಡರ ಸಭೆ ನಡೆಸಲಾಯಿತು.ಇಲ್ಲಿನ ಮಡಿಕೇರಿ ರಸ್ತೆಯ ಕೊಡವ ಕಲ್ಚರಲ್ ಕ್ಲಬ್‍ನಲ್ಲಿ ಕಾಫಿ ಬೆಳೆಗಾರರು, ರೈತರು ಹಾಗೂ ಕಾರ್ಮಿಕ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟುವ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ, ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಇತ್ತೀಚೆಗೆ ಶ್ರೀಮಂಗಲ ಕುರ್ಚಿ ಗ್ರಾಮದಲ್ಲಿ ಕಾಡಾನೆಗಳು ಭತ್ತದ ಕೃಷಿ ಸೇರಿದಂತೆ ಬೆಳೆ ನಾಶಪಡಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಒತ್ತಡ ಹೇರಿ ಸ್ಥಳದಲ್ಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಆ ಭಾಗದ ರೈತರಿಗೆ ಹಂತ ಹಂತವಾಗಿ ಪರಿಹಾರ ನೀಡಿದ್ದಾರೆ. ರೈತರು, ಬೆಳೆಗಾರರು ಹಾಗೂ ಕಾರ್ಮಿಕರು ಒಟ್ಟಾಗಿ ಹೋರಾಟದ ಮೂಲಕ ಹೋರಾಟ ನಡೆಸಿದರೆ ಮಾತ್ರ ಕಾಡಾನೆ ಮಾನವ ಸಂಘರ್ಷಕ್ಕೆ ತಾರ್ಕಿಕ ಅಂತ್ಯ ಸಾಧ್ಯ ಎಂದರು. ಮುಂದಿನ ದಿನಗಳಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರದ ಬಗ್ಗೆ ಚರ್ಚೆ ನಡೆಸಬೇಕೆಂದು ಸಲಹೆ ನೀಡಿದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಜಿಲ್ಲಾದ್ಯಂತ ಕಾಡಾನೆ ಹಾವಳಿಯಿಂದ ಜನತೆ ನೋವು ಅನುಭವಿಸುತ್ತಿದ್ದು, ಕಾಡಾನೆಗಳಿಗೆ ಅರಣ್ಯದಲ್ಲಿ ಆಹಾರ ನೀರು ಸಿಗದೆ ನಾಡಿಗೆ ಲಗ್ಗೆ ಇಡುತ್ತಿವೆ. ಅರಣ್ಯ ಇಲಾಖೆಯವರು ತೇಗದ ಮರಗಳನ್ನು ನೆಟ್ಟು ಬೆಳೆಸಿ ಅದನ್ನೇ ಮಾರಾಟ ಮಾಡುತ್ತಿದ್ದು, ಕಾಡಾನೆಗಳಿಗೆ ಬೇಕಾದ ಆಹಾರದ ಗಿಡ ನೆಡುತ್ತಿಲ್ಲ ಎಂದರು. ಇಲಾಖೆಯು ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರದ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ತೇಗದ ಮರಗಳನ್ನು ಕಡಿದು ತಾವೇ ಅರಣ್ಯದಲ್ಲಿ ಬಿದಿರು ಸೇರಿದಂತೆ ಕಾಡಾನೆಗಳಿಗೆ ಬೇಕಾದ ಆಹಾರವನ್ನು ನೆಟ್ಟು ಬೆಳೆಸಬೇಕೆಂದರು.

ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ

(ಮೊದಲ ಪುಟದಿಂದ) ಉಪಟಳದಿಂದಾಗಿ ಕಪ್ರ್ಯೂ ವಾತಾವರಣ ನಿರ್ಮಾಣವಾಗಿದ್ದು, ಕಳೆದ ಕೆಲವು ವರ್ಷಗಳಿಂದ 36 ಮಂದಿ ಕಾಡಾನೆ ಧಾಳಿಗೆ ಸಾವನ್ನಪ್ಪಿದ್ದಾರೆ. ಕಾಡಾನೆ ಧಾಳಿಯನ್ನು ನಿಯಂತ್ರಿಸಲು ವೈಜ್ಞಾನಿಕ ಕಂದಕ, ಸೊಲಾರ್ ಬೇಲಿ ನಿರ್ಮಾಣಮಾಡಬೇಕು, ಕೇರಳ, ಕರ್ನಾಟಕ ಹಾಗೂ ತಮಿಳುನಾಡು ಸೇರಿ ಅರಣ್ಯದಲ್ಲಿ ಒಟ್ಟು 10 ಸಾವಿರ ಕಾಡಾನೆಗಳಿದ್ದು, ರಾಜ್ಯದಲ್ಲಿ 5 ಸಾವಿರದಷ್ಟು ಕಾಡಾನೆಗಳಿವೆ. ಕಾಡಿನಲ್ಲಿ ಸೂಕ್ತ ಆಹಾರವಿಲ್ಲದ ಕಾರಣ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿದ್ದು, ಸರಕಾರ ಹಾಗೂ ಅರಣ್ಯ ಇಲಾಖೆ ಕಾಡಾನೆ ಮಾನವ ಸಂಘರ್ಷವನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದರು.

ಕಾರ್ಮಿಕ ಮುಖಂಡ ಪಿ.ಆರ್ ಭರತ್, ಕಾಡಾನೆ ಧಾಳಿಗೆ ಸಿಲುಕಿ ಸಾವನ್ನಪ್ಪುವ ಮೃತರ ಕುಟುಂಬಕ್ಕೆ ಕನಿಷ್ಠ ರೂ. 50 ಲಕ್ಷ ಹಣ ಪರಿಹಾರ ನೀಡಬೇಕು. ಕಾಡಾನೆಗಳು ಕಾಫಿ ತೋಟಗಳಿಗೆ ಬಾರದ ರೀತಿಯಲ್ಲಿ ವೈಜ್ಞಾನಿಕ ಯೋಜನೆ ರೂಪಿಸಬೇಕು. ಕಾಡಾನೆಗಳನ್ನು ಕಾಡಿಗಟ್ಟುವ ಹೆಸರಿನಲ್ಲಿ ಹಾಗೂ ವಿವಿಧ ಯೋಜನೆಗಳ ಹೆಸರಿನಲ್ಲಿ ಸರಕಾರ ನೀಡುವ ಅನುದಾನವನ್ನು ಅರಣ್ಯ ಇಲಾಖಾ ಅಧಿಕಾರಿಗಳು ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮೇಲೆ ಒತ್ತಡ ತರುವ ಮೂಲಕ ಕಾಡಾನೆಗಳ ಹಾವಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕು. ಕೇರಳ ರಾಜ್ಯದಲ್ಲಿ ಕಾಡಾನೆ ದಾಳಿಯಾದ ಸಂದರ್ಭ ಅಲ್ಲಿನ ಶಾಸಕರುಗಳು ವಿಧಾನಸಭೆಯ ಕಲಾಪ ನಡೆಯದಂತೆ ಹೋರಾಟ ನಡೆಸುತ್ತಾರೆ. ಜಿಲ್ಲೆಯ ಜನತೆ ಒಗ್ಗೂಡಿ ನಿರಂತರ ಹೋರಾಟ ಮಾಡುವದರ ಮೂಲಕ ಸರಕಾರದ ಗಮನ ಸೆಳೆಯಬೇಕು ಎಂದರು.

ಸಿದ್ದಾಪುರ ನಗರ ಪತ್ರಕರ್ತರ ಸಂಘದ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಕಾಡಾನೆ ಹಾವಳಿಯು ಜಿಲ್ಲೆಯ ಸಾಮಾಜಿಕ ಸಮಸ್ಯೆಯಾಗಿದೆ. ಕಾಡಾನೆ ಹಾವಳಿಯ ವಿರುದ್ಧ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ, ಸಮಿತಿಯ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಬೆಳೆಗಾರರು, ರೈತರು ಹಾಗೂ ಕಾರ್ಮಿಕರು ಒಗ್ಗೂಡಿ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಮುಖಂಡ ಆದೇಂಗಡ ಅಶೋಕ್ ಮಾತನಾಡಿ, ಅರಣ್ಯದಲ್ಲಿರಬೇಕಾದ ಅಧಿಕಾರಿಗಳು ಪಟ್ಟಣದಲ್ಲಿ ಎಸಿ ಕೊಠಡಿಯಲ್ಲಿ ಕುಳಿತಿದ್ದಾರೆ. ಅಧಿಕಾರಿಗಳು ಅರಣ್ಯದಲ್ಲಿ ಕರ್ತವ್ಯ ನಿರ್ವಹಿಸಬೇಕು. ಕಾಡಿನಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರವನ್ನು ಇಲಾಖೆ ನೀಡಬೇಕು ಎಂದರು.

ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ ರಮೇಶ್ ಮಾತನಾಡಿ, 2008 ರಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು 365 ಕೋಟಿ ರೂ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಬೇಕು. ಬಿದಿರುಗಳು ನಾಶವಾಗುತ್ತಿರುವದು ತಿಳಿದರೂ ಸರಕಾರ ಮತ್ತು ಇಲಾಖೆ ಬಿದಿರುಗಳನ್ನು ನಡುವಲ್ಲಿ ಆಸಕ್ತಿ ತೋರಲಿಲ್ಲ ಎಂದರು.

ಹಿರಿಯ ವಕೀಲ ಹೇಮಚಂದ್ರ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಹಲವು ಹೋರಾಟಗಳು ನಡೆದರೂ ಯಾವದೇ ಪ್ರಯೋಜನವಾಗಲಿಲ್ಲ. ಹಾಗಾಗಿ ನ್ಯಾಯಾಂಗದ ಮೂಲಕ ನ್ಯಾಯ ಪಡೆಯಬೇಕು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‍ನಲ್ಲಿ ದಾಖಲಿಸಬೇಕು ಎಂದರು.

ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಕಾರ್ಮಿಕ ಸಂಘಟನೆ ಈ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ. ರೈತರು ಹಾಗೂ ಕಾರ್ಮಿಕರ ನಡುವೆ ಒಡಕು ತಂದು ಹೋರಾಟವನ್ನು ಹತ್ತಿಕ್ಕುವ ಯತ್ನಗಳು ನಡೆಯುತ್ತಿದ್ದು, ಬೆಳೆಗಾರರು ಹಾಗೂ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟ ನಡೆಸಬೇಕೆಂದರು.

ನೆಲ್ಲಮಕ್ಕಡ ವಿವೇಕ್ ಮಾತನಾಡಿ, ಕಾಡಾನೆಗಳ ಸಂಖ್ಯೆ ಹೆಚ್ಚಾಗಿದ್ದು, ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ ಚೇರಂಡ ನಂದ ಸುಬ್ಬಯ್ಯ ಮಾತನಾಡಿ, ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡುಗಳುÀ ಬೀಡುಬಿಟ್ಟಿದ್ದು, ದಿನದಿಂದ ದಿನಕ್ಕೆ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾಡಾನೆಗಳ ಸಂಖ್ಯೆ ನಿಯಂತ್ರಿಸಲು ಕಾಡಾನೆಗಳ ಸಂತಾನ ಹರಣ ಮಾಡಬೇಕು. ದುಬಾರೆಯಲ್ಲಿ ಖಾಸಗಿ ವ್ಯಕ್ತಿಗಳು 2 ಆನೆಗೆ ಪರವಾನಗಿ ಪಡೆದು ಈಗ ಹೆಚ್ಚು ಆನೆಗಳನ್ನು ಸಾಕುತ್ತಿದ್ದಾರೆ. ದುಬಾರೆಯ 28 ಸಾಕಾನೆಗಳು ಸೇರಿದಂತೆ ಖಾಸಗಿ ವ್ಯಕ್ತಿಗಳ ಆನೆಗಳು ದುಬಾರೆ ಮೀಸಲು ಅರಣ್ಯದಲ್ಲಿ ಮೇಯುತ್ತಿದ್ದು, ಕಾಡಾನೆಗಳು ಆಹಾರಕ್ಕೆ ಪರದಾಡಬೇಕಾಗಿದೆ. ಖಾಸಗಿ ವ್ಯಕ್ತಿಗಳ ವಿರುದ್ಧ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದರು. ತಾ. 18 ರಂದು ಮಡಿಕೇರಿಯ ಅರಣ್ಯ ಭವನದಲ್ಲಿ ಜಿಲ್ಲಾ ಮಟ್ಟದ ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಇಂದಿನ ಸಭೆಯ ನಿರ್ಣಯಗಳನ್ನು ಮಂಡಿಸಲಾಗುವದು ಹಾಗೂ ಕಾರ್ಮಿಕರು, ಬೆಳೆಗಾರರು ಹಾಗೂ ರೈತರು ಸಭೆಯಲ್ಲಿ ಪಾಲ್ಗೊಳ್ಳಬೇಕೆಂದರು.

ಸಣ್ಣ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಪಿ ಗಣಪತಿ, ಬೆಳೆಗಾರರಾದ ನಡಿಕೇರಿಯಂಡ ಮಾಚಯ್ಯ, ಮಂಡೇಪಂಡ ಅರ್ಜುನ್, ಪ್ರವೀಣ್ ಬೋಪಯ್ಯ, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಗಣಪತಿ, ಉದ್ದಪಂಡ ಜಗತ್, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಬೆಳೆಗಾರರು, ರೈತರು ತಮ್ಮ ಸಲಹೆಯನ್ನು ನೀಡಿದರು. ಕಾರ್ಯಕ್ರಮವನ್ನು ಸಿದ್ದಾಪುರದ ಕಾಫಿ ಬೆಳೆಗಾರ ಮಂಡೇಂಪಂಡ ಪ್ರವೀಣ್ ಬೋಪಯ್ಯ ಆಯೋಜಿಸಿದ್ದರು.

ಚೇರಂಡ ನಂದ ಸುಬ್ಬಯ್ಯ ಸ್ವಾಗತಿಸಿ, ರೆಜಿತ್ ಕುಮಾರ್ ಗುಹ್ಯ ವಂದಿಸಿದರು.