ವೀರಾಜಪೇಟೆ, ಜ. 15: ಇಂದು ನಾವು ಎಲ್ಲಾ ವಿಚಾರದಲ್ಲಿ ಸರ್ವ ಸ್ವಾತಂತ್ರ್ಯ ಹೊಂದಿದ್ದು, ಸಾಕಷ್ಟು ನೆಮ್ಮದಿಯ ಬದಕು ಕಾಣುತ್ತಿದ್ದೇವೆ. ಆದರೆ ಇದಕ್ಕೆ ಕಾರಣಕರ್ತರಾದ ಅಂದಿನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸಿಕೊಳ್ಳಬೇಕು. ಅವರ ಮಹತ್ವವನ್ನು ಅರಿಯಬೇಕು, ಅಂತಹ ಅನೇಕ ಜನರ ಹೋರಾಟದ ಫಲವೇ ನಮ್ಮ ದೇಶದ ಸ್ವಾತಂತ್ರ್ಯ ಎಂದು ಜಿಲ್ಲಾಧಿಕಾರಿ ಶ್ರೀ ವಿದ್ಯಾ ಹೇಳಿದರು.
ಅಮ್ಮತ್ತಿ ಕೊಡವ ಸಮಾಜ ಸಭಾಂಗಣದಲ್ಲಿ ಕೊಡವ ಮಕ್ಕಡ ಕೂಟ ಮತ್ತು ಅಮ್ಮತ್ತಿ ಕೊಡವ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಅಧ್ಯಯನ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಂದ್ಯಂಡ ಬೆಳ್ಯಪ್ಪ ಅವರು ಅಂದು ಪತ್ರಕರ್ತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ವ್ಯಕ್ತಿಯಾಗಿದ್ದರು. ಗಾಂಧೀಜಿಯವರ ಒಡನಾಡಿಯಾಗಿ ಕೆಲಸ ಮಾಡಿದ್ದು ಹಮ್ಮೆಯ ವಿಚಾರ. ಅಂತಹವರ ಕುರಿತ ಅಧ್ಯಯನ ಕೃತಿ ಭವಿಷ್ಯದಲ್ಲಿ ಮಾಹಿತಿ ನೀಡುವ ಕೃತಿಯಾಗಿ ಉಳಿಯಲಿದೆ. ಸಂವಿಧಾನಕ್ಕೆ ಬದ್ಧರಾಗಿ ನಡೆಯಬೇಕು ಎಂದು ಹೇಳಿದರು.
ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಸಂಪಾದಕ ಉಳ್ಳಿಯಡ ಪೂವಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕೊಡಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಕಾರ್ಯ ಮಾಡಿದ ಪಂದ್ಯಂಡ ಬೆಳ್ಯಪ್ಪ ಅವರಿಗೆ ಸೂಕ್ತ ಸ್ಥಾನಮಾನ, ಪ್ರಚಾರ ಸಿಗಲಿಲ್ಲ. ಇದಕ್ಕೆ ಕೊಡಗಿನ ಜನರಲ್ಲಿ ಇರುವ ಕೀಳರಿಮೆ ಒಂದು ಕಾರಣ. ಚರಿತ್ರೆಯಲ್ಲಿ ಸತ್ಯ, ಪ್ರಾಮಾಣಿಕತೆ ಇಲ್ಲದೆ ಚರಿತ್ರೆ ರಚಿಸಿದವರ ಕೈವಾಡದಿಂದ ಅವರಿಗೆ ಮೋಸ, ದ್ರೋಹವಾಗಿದೆ. ಕೊಡಗಿನ ಗೌರಮ್ಮರಂತೆ ಗಾಂಧೀಜಿಯವರಿಗೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಆಭರಣಗಳನ್ನು ನೀಡಿದ ಹೆಗ್ಗಳಿಕೆಗೆ ಪಂದ್ಯಂಡ ಸೀತಾ ಬೆಳ್ಯಪ್ಪ ಭಾಜನರಾಗಬೇಕು. ಆದರೆ ಅವರ ಹೆಸರನ್ನು ಮರೆಮಾಚಿರುವದು ಚರಿತ್ರೆ ತಿಳಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಮಾತನಾಡಿ, ಪುಸ್ತಕ ಬಿಡುಗಡೆ ಸಮಾರಂಭ ನಮ್ಮ ಸಮಾಜದಲ್ಲಿ ಪ್ರಥಮ ಸಭೆಯಾಗಿದೆ. ಇಂದಿನ ಪೀಳಿಗೆಗೆ ಇದನ್ನು ತಿಳಿಯುವಷ್ಟು ತಾಳ್ಮೆ ಇಲ್ಲ, ತಿಳಿಸುವವರು ಯಾರು ಇಲ್ಲ. ಆದ್ದರಿಂದ ಈ ರೀತಿಯ ಅಧ್ಯಯನ ಪುಸ್ತಕ ಆಗತ್ಯವಿದೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಅಂಗೀರ ಕುಸುಮ್ ಕೃತಿಯ ಬಗ್ಗೆ ಮಾತನಾಡಿದರು, ಮುಖ್ಯ ಅತಿಥಿಗಳಾಗಿದ್ದ ಪಂದ್ಯಂಡ ಬೆಳ್ಯಪ್ಪ ಅವರ ಪುತ್ರ ವಿಜಯ ಬೆಳ್ಯಪ್ಪ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ , ಸಾಹಿತಿ ಮತ್ತು ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿದರು.
ಇದೇ ಸಂದರ್ಭ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಶ್ರೀವಿದ್ಯಾ, ಬ್ರಹ್ಮಗಿರಿ ಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ , ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೊಡವ ಸಮಾಜದ ಕಾರ್ಯದರ್ಶಿ ನೆಲ್ಲಮಕ್ಕಡ ಸಂಪತ್ ದೇವಯ್ಯ, ಉಪಾಧ್ಯಕ್ಷ ಮೊಳ್ಳೆರ ಸದಾ ಅಪ್ಪಚ್ಚು, ಆಡಳಿತ ಮಂಡಳಿ ಸದಸ್ಯರಾದ ಮಾಚಿಮಡ ಸುರೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭ ಚೇಂದಿರ ನಿರ್ಮಲ ಬೋಪಣ್ಣ, ಚಕ್ಕೆರ ಪಂಚಮ್ ತ್ಯಾಗರಾಜ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ, ಅಂಗೀರ ಕುಸುಮ್, ವಿ.ಟಿ.ಶ್ರೀನಿವಾಸ್ ಮತ್ತು ಚಂದ್ರು ಅವರಿಂದ ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ಆರಂಭದಲ್ಲಿ ಅಮ್ಮತ್ತಿ ಜಂಕ್ಷನ್‍ನಿಂದ ಕೊಡವ ಸಮಾಜದವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು.