ಸೋಮವಾರಪೇಟೆ,ಜ.15: ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಗೆ ಒಳಪಡುವ, ನಿಸರ್ಗ ರಮಣೀಯ ಸೌಂದರ್ಯವನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಸಮೀಪದ ಶಾಂತಳ್ಳಿ ಗ್ರಾಮದಲ್ಲಿ ನೆಲೆಯಾಗಿರುವ ಇತಿಹಾಸ ಪ್ರಸಿದ್ಧ ಶ್ರೀಕುಮಾರ ಲಿಂಗೇಶ್ವರ ಸ್ವಾಮಿ ದೇವಾಲಯದ 59ನೇ ವರ್ಷದ ವಾರ್ಷಿಕ ಜಾತ್ರೋತ್ಸವ ರಂಗೇರುತ್ತಿದೆ. ಸೋಮವಾರಪೇಟೆ ಮಾತ್ರವಲ್ಲದೆ ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದು, ಶಾಂತಳ್ಳಿಯಲ್ಲಿ ಸಂಭ್ರಮ ಮನೆಮಾಡಿದೆ.

800 ವರ್ಷಗಳಷ್ಟು ಇತಿಹಾಸ ಹೊಂದಿರುವ ಶ್ರೀಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ 59ನೇ ವರ್ಷದ ಮಹಾರಥೋತ್ಸವ ಹಾಗೂ ವಾರ್ಷಿಕ ಮಹಾ ಪೂಜೋತ್ಸವಕ್ಕೆ ಮೂರು ದಿನಗಳ ಹಿಂದೆ ಆರಂಭಗೊಂಡಿದ್ದು, ಇಂದು ಜಾತ್ರೋತ್ಸವ ಏರ್ಪಟ್ಟಿದೆ. ಸಾವಿರಾರು ಮಂದಿ ಸರತಿಸಾಲಿನಲ್ಲಿ ನಿಂತು ಶ್ರೀಕುಮಾರಲಿಂಗೇಶ್ವರ ದೇವರ ದರ್ಶನವನ್ನು ಪಡೆಯುತ್ತಿದ್ದಾರೆ. ಪುಷ್ಪಗಿರಿ ಬೆಟ್ಟತಪ್ಪಲು ವ್ಯಾಪ್ತಿಯ ಶಾಂತಳ್ಳಿ, ಬೆಟ್ಟದಳ್ಳಿ, ಹರಗ, ಕೂತಿನಾಡು, ತೋಳುನಾಡು, ಪುಷ್ಪಗಿರಿ, ಯಡೂರು, ತಲ್ತರೆಶೆಟ್ಟಳ್ಳಿ, ಬೀದಳ್ಳಿ ಗ್ರಾಮಸ್ಥರು ಸೇರಿದಂತೆ, ಹೊರಜಿಲ್ಲೆಯ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ತಾ.16 ರಂದು (ಇಂದು) ಮಹಾ ರಥೋತ್ಸವ ನೆರವೇರಲಿದ್ದು ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಇಂದು ಮಧ್ಯಾಹ್ನ 12ಗಂಟೆಗೆ ಮಹಾರಥೋತ್ಸವ ಜರುಗಲಿದ್ದು, ಅಲಂಕೃತ ರಥದಲ್ಲಿ ಉತ್ಸವ ಮೂರ್ತಿ ಯನ್ನು ಕುಳ್ಳಿರಿಸಿ, ದೇವಾಲಯದಿಂದ ಗ್ರಾಮದ ರಥಬೀದಿಯವರೆಗೆ ಮೆರವಣಿಗೆ ನಡೆಸಲಾಗುತ್ತದೆ. ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ತಾ.17ರಂದು ಮಹಾ ಸಂಪ್ರೋಕ್ಷಣೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾ ಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ಮಾಡುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ತೆರೆಬೀಳಲಿದೆ.

ಶಾಂತಳ್ಳಿ ಗ್ರಾಮದಲ್ಲಿ ನೆಲೆ ಯಾಗಿರುವ ಶ್ರೀ ಕುಮಾರ ಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೆಯನ್ನು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಆಚರಿಸಿ ಕೊಂಡು ಬರುತ್ತಿರುವದು ವಿಶೇಷ. ಜಾತ್ರೆಯನ್ನು ಈ ವ್ಯಾಪ್ತಿಯ ಜನತೆ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದು, ನೆಂಟರಿಷ್ಟರನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಉದ್ಯೋಗ ಸೇರಿದಂತೆ ಇನ್ನಿತರ ಕಾರ್ಯ ನಿಮಿತ್ತ ಹೊರಭಾಗದಲ್ಲಿ ನೆಲೆಸಿರುವ ಮಂದಿಯೂ ಸಹ ಈ ಜಾತ್ರೆಯಲ್ಲಿ ಒಟ್ಟಾಗುವದರಿಂದ ಇಡೀ ಗ್ರಾಮವೇ ಸಂಭ್ರಮದಲ್ಲಿದೆ. ಕೊಡಗು ಜಿಲ್ಲೆ ಮಾತ್ರವಲ್ಲದೇ ಪಕ್ಕದ ಸಕಲೇಶಪುರ, ಕೊಣನೂರು, ಮೈಸೂರು ಜಿಲ್ಲೆಗಳಿಂದ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ.

ತಾ. 16 ರಂದು (ಇಂದು) 59 ನೇ ಮಹಾರಥೋತ್ಸವ ನಡೆಯಲಿದ್ದು ಮಧ್ಯಾಹ್ನ ಅನ್ನದಾನ ಹಾಗೂ ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಕಳೆದ 2 ದಿನಗಳಿಂದ ಜಾತ್ರೋತ್ಸವದ ಅಂಗವಾಗಿ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಅಂತರ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಯುತ್ತಿದೆ. ಜಾತ್ರೋತ್ಸವದಲ್ಲಿ ಪಾಲ್ಗೊಂಡ ಗ್ರಾಮಾಂತರ ಪ್ರದೇಶಗಳ ರೈತರಿಗೆ ಹೊಸ ವೈಜ್ಞಾನಿಕ ತಿಳುವಳಿಕೆಗಳನ್ನು ನೀಡಲು ಕೃಷಿ, ತೋಟಗಾರಿಕೆ, ಸಂಬಾರ ಮಂಡಳಿ ಸೇರಿದಂತೆ ಸರ್ಕಾರದ ಹಲವು ಇಲಾಖೆಗಳು ವಸ್ತು ಪ್ರದರ್ಶನವನ್ನು ಏರ್ಪಡಿಸುವದರೊಂದಿಗೆ ಮಾಹಿತಿ ಗಳನ್ನು ನೀಡುತ್ತಿವೆ. ಗ್ರಾಮಾಂತರ ಪ್ರದೇಶಗಳ ರೈತರು ಬೆಳೆದ ಉತ್ತಮ ತಳಿಯ ಬೆಳೆಗಳು, ವಿವಿಧ ನಮೂನೆಯ ಜೇನಿನ ಅರಿಗಳನ್ನು ಇಲ್ಲಿ ಪ್ರದರ್ಶನ ನಡೆಸಲಾಗುತ್ತಿದೆ.

-ವಿಜಯ್ ಹಾನಗಲ್