ಸೋಮವಾರಪೇಟೆ, ಜ. 15: “ಮೈಸೂರು, ಕೊಡಗು, ಚಿತ್ರದುರ್ಗ, ಮಲಬಾರ್ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹತ್ಯೆ, ಅತ್ಯಾಚಾರ, ಮತಾಂತರ ಎಸಗಿ ದೌರ್ಜನ್ಯ ನಡೆಸಿರುವ ಮತಾಂಧ ಟಿಪ್ಪುವಿನ ಜಯಂತಿಯನ್ನು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ರದ್ದುಗೊಳಿಸುತ್ತೇವೆ” ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಯುವ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹನುಮ ಜಯಂತಿಯನ್ನು ಆಚರಿಸಲು ತಡೆ ಹಾಕುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು ಜಯಂತಿ ಯನ್ನು ಆಚರಿಸಲು ಮುಂದಾಗುತ್ತಿರು ವದು ಕೊಡಗು ಸೇರಿದಂತೆ ರಾಜ್ಯದ ಜನರ ದೌರ್ಭಾಗ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖ್ಯಮಂತ್ರಿ ಕೆ.ಸಿ. ರೆಡ್ಡಿಯವರಿಂದ ಪ್ರಾರಂಭಗೊಂಡು ಇಲ್ಲಿಯವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಕೇವಲ 1.15 ಲಕ್ಷ ಕೋಟಿ ರೂ. ಸಾಲ ಮಾಡಿದ್ದರು. ಆದರೆ, ಸಿದ್ದರಾಮಯ್ಯರವರು ಒಂದೇ ಅವಧಿಯಲ್ಲಿ 1.42 ಲಕ್ಷ ಕೋಟಿ ರೂ. ಸಾಲ ಮಾಡಿ ಕರ್ನಾಟಕದ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ. ಕಳ್ಳ ಬಿಲ್ಲು-ಸುಳ್ಳು ಲೆಕ್ಕ ಕಾಂಗ್ರೆಸ್ ಆಡಳಿತವಾಗಿದೆ. ಸಿದ್ದರಾಮಯ್ಯ ನವರ ಸಾಧನೆಯನ್ನು ತಿಳಿಯಬೇಕಾದರೆ ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್‍ರವರ ಡೈರಿಯನ್ನು ನೋಡ ಬೇಕಿದೆ ಎಂದು ಕುಟುಕಿದರು.

ಕರ್ನಾಟಕ ಅತೀ ಹೆಚ್ಚು ಸಾಲ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯಾದ್ಯಂತ 3,500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ದಲ್ಲಿ ನಂ.1, ಅತ್ಯಾಚಾರ-ಕೋಮುಗಲಭೆ ಯಲ್ಲಿ ನಂ.2 ಸ್ಥಾನದಲ್ಲಿ ಕರ್ನಾಟಕ ವನ್ನು ತಂದು ನಿಲ್ಲಿಸಿದ್ದಾರೆ. ಇಂತಹ ಸರ್ಕಾರವನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕು ಎಂದು ಹೇಳುವ ಮೂಲಕ ಕಾರ್ಯಕರ್ತರನ್ನು ಹುರಿ ದುಂಬಿಸಿದರು.