ಗೋಣಿಕೊಪ್ಪ ವರದಿ, ಜ. 15: ಕೇಂದ್ರ ಬಜೆಟ್‍ನಲ್ಲಿ ಅಂಗೀಕಾರದ ಹಂತದಲ್ಲಿರುವ ಕೊಡಗು ಮೂಲಕ ನಿರ್ಮಿಸಲು ಉದ್ದೇಶಿಸಿರುವ ಮೈಸೂರು - ವಯನಾಡು ರೈಲ್ವೆ ಮಾರ್ಗದ ನಿರ್ಮಾಣದ ಕುರಿತು ತಾ. 17 ರಂದು (ನಾಳೆ) ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.

ಕೇರಳ ರಾಜ್ಯದ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಅವರು ತಾ. 17 ರಂದು ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದು, ಬಜೆಟ್‍ಗೂ ಮುನ್ನ ಅಂತಿಮ ನಿರ್ಧಾರ ಹೊರ ಬರುವ ಸಾಧ್ಯತೆ ಇದೆ.

ಕೇರಳ ರಾಜ್ಯದ ಜನಪ್ರತಿನಿಧಿಗಳ ಕಾಳಜಿಯಿಂದ ಮೈಸೂರು-ವಯನಾಡು ರೈಲ್ವೆ ಮಾರ್ಗಕ್ಕೆ ಶೀಘ್ರವಾಗಿ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಗುವ ಸಾಧ್ಯತೆಯಿದೆ. ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವ ನಿರೀಕ್ಷೆ ದಟ್ಟವಾಗಿದೆ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣ, ಕೊಡಗು ಮೂಲಕ ಕೇರಳ ರಾಜ್ಯದ ಮಾರ್ಗವಾಗಿ ವಯನಾಡು ತಲಚೇರಿಗೆ ಸಂಪರ್ಕಿಸುವ ಮಾರ್ಗ ಇದಾಗಿದೆ. 240 ಕಿ. ಮಿ. ರೈಲ್ವೆ ಮಾರ್ಗಕ್ಕೆ ಅಂದಾಜು ಮೊತ್ತ 5,052 ಕೋಟಿ ರೂ. ಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ.

ಕೇರಳ ಅಭಿವೃದ್ದಿ ನಿಗಮ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿರುವ ಮಾಹಿತಿಯನ್ನು ಕೇರಳ ರಾಜ್ಯದ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ದೃಢÀಪಡಿಸಿದ್ದಾರೆ. ಲೋಕೋಪಯೋಗಿ ಮಂತ್ರಿಗಳ ಅಡಿಷನಲ್ ಪ್ರೈವೇಟ್ ಸೆಕ್ರಟರಿ ಕೆ. ಜಿ. ಪದ್ಮಕುಮಾರ್ ರೈಲ್ವೆ ಮಾರ್ಗದ ಬಗ್ಗೆ ಭಾರತೀಯ ರೈಲ್ವೆ ನಿಗಮದ ಅಧ್ಯಕ್ಷ ಅಶ್ವಿನಿ ಲೋಹಾನಿ ಅವರೊಂದಿಗೆ 2017 ಅಕ್ಟೋಬರ್‍ನಲ್ಲಿ ಮಾತುಕತೆ ನಡೆಸಿದ್ದರು. ನಂತರದ ಬೆಳವಣಿಗೆಯಲ್ಲಿ ಕೇರಳ ಲೋಕೋಪಯೋಗಿ ಸಚಿವರು ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆಗೆ ಮುಂದಾಗಲು ಯೋಜನೆ ರೂಪಿಸಿದ್ದರು. ಇದರಂತೆ ಕೇರಳ ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಅವರು, ಕೇಂದ್ರ ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ತಾ. 17 ರಂದು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರದಂತೆ ರೈಲ್ವೆ ಮಾರ್ಗಕ್ಕೆ ಮುಂದಿನ ಬಜೆಟ್ ಅಧಿವೇಶದಲ್ಲಿ ಅಂಗೀಕಾರಗೊಳ್ಳುವ ಸಾಧ್ಯತೆಯಿರುವದಾಗಿ ತಿಳಿದು ಬಂದಿದೆ.