ಮಡಿಕೇರಿ, ಜ. 15: ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆ ಇಲ್ಲಿನ ನ್ಯಾಯಾಲಯ ಆರೋಪಿಗೆ ದಂಡ ಸಹಿತ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಳೆದ ತಾ. 12.8.2013ರಂದು ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದ ನಿವಾಸಿ ಜಿ.ಕೆ. ಲೋಕೇಶ್ ಎಂಬಾತ ಅದೇ ಗ್ರಾಮದ ವಿವಾಹಿತ ಮಹಿಳೆಯೋರ್ವರ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ, ಬಂದೂಕು ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದ. ಈ ಸಂಬಂಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಲೋಕೇಶ್‍ನನ್ನು ಬಂಧಿಸಿದ ಸೋಮವಾರಪೇಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ದಂಡ ಸಹಿತ ಒಟ್ಟು 12 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ವೆಸಗಿದ್ದಕ್ಕಾಗಿ 7 ವರ್ಷ ಸಜೆ ಹಾಗೂ ರೂ. 10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 4 ತಿಂಗಳ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಕೊಲೆ ಬೆದರಿಕೆಯೊಡ್ಡಿದ ಆರೋಪಕ್ಕಾಗಿ ಮೂರು ವರ್ಷ ಸಜೆ ಹಾಗೂ ರೂ. 5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಎರಡು ತಿಂಗಳ ಹೆಚ್ಚುವರಿ ಸಜೆ, ಶಸ್ತ್ರಾಸ್ತ್ರ ಕಾಯ್ದೆಯಡಿ 2 ವರ್ಷ ಸಜೆ ಹಾಗೂ ರೂ. 5 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ 2 ತಿಂಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಪಾವತಿಯಾಗುವ ದಂಡದಲ್ಲಿ ರೂ. 15 ಸಾವಿರವನ್ನು ನೊಂದ ಮಹಿಳೆಗೆ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ವಿಶೇಷ ಅಭಿಯೋಜಕರನ್ನು ನೇಮಿಸಿದ್ದು, ಹೈಕೋರ್ಟ್ ವಕೀಲ ರಮೇಶ್ ವಿಶೇಷ ಅಭಿಯೋಜಕರಾಗಿ ವಾದ ಮಂಡಿಸಿದ್ದರು.