ಶನಿವಾರಸಂತೆ, ಜ. 15: ಸಮೀಪದ ಕೊಡ್ಲಿಪೇಟೆಯ ವಿದ್ಯುತ್ ಇಲಾಖೆ ಲೈನ್‍ಮ್ಯಾನ್‍ವೊಬ್ಬರು ಕಾರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಂಚಮ್ಮನ ಹೊಸಕೋಟೆ ಬಳಿ ನಡೆದಿದೆ. ಕೊಡ್ಲಿಪೇಟೆಯಲ್ಲಿ 13 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಶಶಿಗೌಡ (36) ಮೃತಪಟ್ಟ ಲೈನ್‍ಮ್ಯಾನ್. ಕೊಡ್ಲಿಪೇಟೆ ವಿದ್ಯುತ್ ಉಪಘಟಕದ ಕಿರಿಯ ಸಂಪರ್ಕ ಅಧಿಕಾರಿ ಮನುಕುಮಾರ್ ಅವರು ತಮ್ಮ ಪುತ್ರ ಹಾಗೂ ಮೃತ ಶಶಿಗೌಡ ಮೂವರು ಕಾರ್ಯ ನಿಮಿತ್ತ ಹಾಸನ ಜಿಲ್ಲೆಯ ಬಾಳುಪೇಟೆಗೆ ಹೋಗಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

ನಿಯಂತ್ರಣ ತಪ್ಪಿ ಮನುಕುಮಾರ್ ಚಾಲಿಸುತ್ತಿದ್ದ ಕಾರು ರಸ್ತೆ ಬದಿ ತಡೆಗೋಡೆಗೆ ಅಪ್ಪಳಿಸಿದಾಗ ಶಶಿಗೌಡ ಸ್ಥಳದಲ್ಲೇ ಮೃತಪಟ್ಟರು. ಕಾಲಿಗೆ ಗಂಭೀರ ಗಾಯವಾಗಿರುವ ಮನುಕುಮಾರ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮೈಸೂರು ಜಿಲ್ಲೆಯ ಬಿಳಿಕೆರೆ ಬಳಿ ಚಿಕ್ಕಬೂಚನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆಯಿತು.