70ನೇ ವರ್ಷದ `ಸೇನಾ ದಿನ' ಆಚರಣೆ ನವದೆಹಲಿ, ಜ.15 : ಭಾರತೀಯ ಸೇನೆ ಸೋಮವಾರ 70ನೇ ವರ್ಷದ `ಸೇನಾ ದಿನ' ಆಚರಿಸಿತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಶುಭಾಶಯ ಕೋರಿದರು. ಭಾರತೀಯ ಸೇನೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು, `ಭಾರತೀಯ ಸೇನೆಯ ವೀರ ಯೋಧರು, ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಸೇನಾ ದಿನದ ಅಭಿನಂದನೆಗಳು. ನಮ್ಮ ಸ್ವಾತಂತ್ರ್ಯದ ಕಾವಲುಗಾರರಾದ ನೀವು ಈ ದೇಶದ ಹೆಮ್ಮೆ. ನೀವು ಎಚ್ಚರದಿಂದಿದ್ದು ಗಡಿ ಕಾಯುತ್ತಿರುವುದರಿಂದಲೇ ನಾಗರಿಕರು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವದು' ಎಂದು ಹೇಳಿದ್ದಾರೆ. `ಸೇನಾ ದಿನಾಚರಣೆಯ ಈ ಸಂದರ್ಭದಲ್ಲಿ ಯೋಧರು ಮತ್ತು ಅವರ ಕುಟುಂಬದವರಿಗೆ ನನ್ನ ಶುಭಾಶಯಗಳು. ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಸೇನೆಯ ಬಗ್ಗೆ ಗೌರವ, ನಂಬಿಕೆ ಮತ್ತು ಹೆಮ್ಮೆ ಇದೆ. ರಾಷ್ಟ್ರವನ್ನು ರಕ್ಷಿಸುವುದರ ಜತೆಗೆ ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳಲ್ಲಿ ಮಾನವೀಯ ಸಹಾಯಕ್ಕೆ ಧಾವಿಸುವ ಸೇನೆಯ ಬಗ್ಗೆ ಗೌರವ ಇದ್ದೇ ಇದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸೇನೆಯಿಂದ ಐವರು ಉಗ್ರರ ಹತ್ಯೆ

ಶ್ರೀನಗರ, ಜ.15 : ಗಡಿಯೊಳಗೆ ನುಸುಳಲು ಪ್ರಯತ್ನಿಸಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಉಗ್ರರನ್ನು ಉರಿ ವಲಯದ ಬರಮುಲ್ಲಾ ಜಿಲ್ಲೆಯ ದುಲಂಜಾ ಗ್ರಾಮದಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಜಮ್ಮು ಕಾಶ್ಮೀರ ಪೆÇಲೀಸರು ಹಾಗೂ ಭಾರತೀಯ ಸೇನೆ, ಕೇಂದ್ರೀಯ ಸಶಸ್ತ್ರ ಅರೆಸೇನಾ ಪಡೆ(ಸಿಎಪಿಎಫ್) ನಡೆಸಿದ ಕಾರ್ಯಾಚರಣೆಯಲ್ಲಿ ಗುಂಡೇಟಿಗೆ ಉಗ್ರರು ಬಲಿಯಾಗಿದ್ದಾರೆ ಎಂದು ರಾಜ್ಯ ಪೆÇಲೀಸ್ ಮಹಾನಿರ್ದೇಶಕ ಶೇಶ್ ಪೌಲ್ ವೈದ್ ತಿಳಿಸಿದ್ದಾರೆ. ಉರಿ ವಲಯದ ಸುತ್ತಮುತ್ತ ಹಲವು ಉಗ್ರರು ಅಡಗಿರುವ ಶಂಕೆಯಿದೆ. ಈಗಾಗಲೇ ಐದು ಮೃತದೇಹ ಪತ್ತೆಯಾಗಿದೆ. ಆರನೇ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ವೈದ್ ಹೇಳಿದ್ದಾರೆ.

ಭಾರತ ಧಾಳಿಗೆ 7 ಪಾಕ್ ಯೋಧರ ಸಾವು

ಜಮ್ಮು, ಜ.15 : ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ಪ್ರತಿ ಧಾಳಿಯಲ್ಲಿ ಪಾಕಿಸ್ತಾನದ 7 ಯೋಧರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ. ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಶನಿವಾರ ಪಾಕಿಸ್ತಾನದ ಯೋಧರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಪಡೆಗಳತ್ತ ಗುಂಡಿನ ಧಾಳಿ ನಡೆಸಿದ್ದರು. ಈ ಧಾಳಿಯಲ್ಲಿ ಭಾರತದ ಒಬ್ಬ ಯೋಧ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸೋಮವಾರ ಪಾಕಿಸ್ತಾನಿ ಪಡೆಗಳತ್ತ ದಾಳಿ ನಡೆಸಿದೆ. ಪೂಂಛ್ ಜಿಲ್ಲೆಯ ಮೇಂಧರ್ ಸೆಕ್ಟರ್ನ ಜಗ್ಲೋಟ್ ಪ್ರದೇಶದಲ್ಲಿ ಸೇನೆ ಪ್ರತಿ ಧಾಳಿ ನಡೆಸಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತ 70ನೇ ಸೇನಾ ದಿನ ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರತಿ ಧಾಳಿ ನಡೆಸಲಾಗಿದೆ.