ಸೋಮವಾರಪೇಟೆ, ಜ. 15: ಕರ್ನಾಟಕ ಸರ್ಕಾರವು ಕಳೆದ ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಇದರ ಮೂಲಕ ಸಮುದಾಯದ ಎಲ್ಲರಿಗೂ ಹತ್ತು ಹಲವು ಸೌಲಭ್ಯಗಳನ್ನು ಒದಗಿಸಿದೆ. ವಿಶ್ವಕರ್ಮ ಸಮುದಾಯದವರು ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ನಿಗಮದ ಜಿಲ್ಲಾ ನಿರ್ದೇಶಕ ಬಿ.ಬಿ. ನಾಗರಾಜು ತಿಳಿಸಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಕೊಡಗು ಜಿಲ್ಲೆಯಿಂದ ತನ್ನನ್ನು ನಾಮನಿರ್ದೇಶಿತ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದು, ಜಿಲ್ಲೆಯ ವಿಶ್ವಕರ್ಮ ಬಾಂಧವರಿಗೆ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸಲಾಗುವದು ಎಂದರು.
ಕೊಡಗಿನಲ್ಲಿ 45 ಸಾವಿರಕ್ಕೂ ಅಧಿಕ ವಿಶ್ವಕರ್ಮ ಬಾಂಧವರಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇತ್ತೀಚೆಗಷ್ಟೇ ಸಂಘಟನಾತ್ಮಕವಾಗಿ ಬಲಗೊಳ್ಳುತ್ತಿದ್ದು, ಜನಾಂಗಕ್ಕೆ ಸವಲತ್ತುಗಳು ದೊರಕಿದರೆ ಇನ್ನಷ್ಟು ಸಬಲರಾಗಬಹುದು. ಈ ದಿಸೆಯಲ್ಲಿ ಸರ್ಕಾರ ಪ್ರತ್ಯೇಕ ನಿಗಮ ಸ್ಥಾಪಿಸಿದೆ ಎಂದರು.
2ಎ ಪ್ರವರ್ಗಕ್ಕೆ ಒಳಪಡುವ ವಿಶ್ವಕರ್ಮ ಸಮುದಾಯಕ್ಕೆ ಭಾಷೆ, ಪ್ರಾಂತ್ಯ, ಕಸುಬಿನ ವ್ಯತ್ಯಾಸವಿಲ್ಲದೇ ಅವರು ಮಾಡುತ್ತಿರುವ ಉದ್ಯೋಗ, ಗಂಗಾಕಲ್ಯಾಣ, ವಿದ್ಯಾಭ್ಯಾಸ, ಗುಡಿಕೈಗಾರಿಕೆಗಳಿಗೆ ರೂ. 40 ಸಾವಿರದಿಂದ 2 ಲಕ್ಷದವರೆಗೂ ಸಾಲ ಸೌಲಭ್ಯ ನೀಡಲಾಗುವದು. 50 ಸಾವಿರ ವಾರ್ಷಿಕ ಆದಾಯ ಹೊಂದಿರುವವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ನಾಗರಾಜ್ ಮನವಿ ಮಾಡಿದರು.
ಕೊಡಗು ಜಿಲ್ಲೆಯ ವಿಶ್ವಕರ್ಮ ಸಮುದಾಯದವರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಹೆಚ್ಚುವರಿಯಾಗಿ ರೂ. 5 ಕೋಟಿ ಅನುದಾನವನ್ನು ಒದಗಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಿಗಮದ ಸವಲತ್ತುಗಳು ಹಾಗೂ ಒಕ್ಕೂಟದ ಸದಸ್ಯತ್ವಕ್ಕಾಗಿ ಮೊ: 9481858878, 9448896499,9844327536 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು. ಗೊಷ್ಠಿಯಲ್ಲಿದ್ದ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಎಸ್.ಜೆ. ದೇವದಾಸ್ ಮಾತನಾಡಿ, ಸಮುದಾಯದ ಬಾಂಧವರನ್ನು ಗ್ರಾಮ, ಹೋಬಳಿ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಂಘಟಿಸಲಾಗುತ್ತಿದೆ ಎಂದರು. ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಕೆ. ರಮೇಶ್ ಮಾತನಾಡಿ, ಸೋಮವಾರಪೇಟೆಯಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ 50 ಸೆಂಟ್ಸ್ ನಿವೇಶನ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಅಲ್ಲಿಂದ ತಾಲೂಕು ತಹಸೀಲ್ದಾರ್‍ಗೆ ಪತ್ರ ಬಂದಿದೆ. ತಹಸೀಲ್ದಾರ್‍ರವರು ಸ್ಥಳಗುರುತಿಸಿ ಪ್ರಸ್ತಾವನೆ ಸಲ್ಲಿಸಬೇಕಿದೆ ಎಂದರು. ಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಕೆ.ಟಿ. ಸಂತೋಷ್ ಉಪಸ್ಥಿತರಿದ್ದರು.