*ಗೋಣಿಕೊಪ್ಪಲು, ಜ. 15: ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಈ ಬಾರಿ ಕಾಫಿ ಪಸಲು ತೀವ್ರ ಇಳಿಮುಖವಾಗಿದೆ. ಬಾಳೆಲೆ, ನಲ್ಲೂರು, ತಿತಿಮತಿ, ಪೊನ್ನಪ್ಪಸಂತೆ, ಕಿರುಗೂರು ದೇವರಪುರ, ಮಾಯಮುಡಿಗಳಲ್ಲಿ ಕಾಫಿ ಫಸಲು ಇಲ್ಲದೆ ಕಾರ್ಮಿಕರು ತೋಟದಲ್ಲಿ ಅಲೆದಾಡಿಕೊಂಡು ಕುಯ್ಲು ಮಾಡುತ್ತಿದ್ದಾರೆ. ತಿತಿಮತಿ, ಬಾಳೆಲೆ, ಪೊನ್ನಪ್ಪಸಂತೆ, ಬೆಸಗೂರು, ಕಾನೂರು, ನಲ್ಲೂರು, ಕಿರುಗೂರು, ದೇವರಪುರ, ಹಾತೂರು, ಮಾಯಮುಡಿ ಭಾಗಗಳಲ್ಲಿ ಶೇ. 85ರಷ್ಟು ಕುಂಠಿತವಾಗಿದೆ. ಇಳುವರಿ ಕಡಿಮೆಯಾಗಿದೆ ಎನ್ನಲಾಗುತ್ತಿದೆ.ಕಳೆದ ವರ್ಷ ಮಳೆ ಕಡಿಮೆಯಾದ ಪರಿಣಾಮದಿಂದ ಈ ಬಾರಿ ಕಾಫಿ ಫಸಲಿಗೆ ಹೊಡೆತ ಬಿದ್ದಿದೆ ಎನ್ನುತ್ತಾರೆ ತಿತಿಮತಿ ಕಾಫಿ ಬೆಳೆಗಾರ ಕೀಕಿರ ವಸಂತ ಅವರು. ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ತಿತಿಮತಿ ಭಾಗಕ್ಕೆ ಸರಾಸರಿ 50 ರಿಂದ 60 ಇಂಚು ಮಳೆ ಬೀಳುವದು ವಾಡಿಕೆ. ಆದರೆ ಕಳೆದ ವರ್ಷ ಕೇವಲ 23 ಇಂಚು ಮಳೆಯಾಗಿತ್ತು. ಇದರ ಪರಿಣಾಮ ಕಾಫಿ ಇಳುವರಿ ಕುಂಠಿತ ವಾಗಲು ಕಾರಣ ಎಂಬದು ಅವರ ಅಭಿಪ್ರಾಯ.
ಗೋಣಿಕೊಪ್ಪಲು ಬಳಿಯ ನಲ್ಲೂರು, (ಮೊದಲ ಪುಟದಿಂದ) ಬೆಸಗೂರು ಭಾಗಗಳಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ. ಆ ಭಾಗಕ್ಕೂ ಮಳೆ ಕೊರತೆಯಾದ ಕಾರಣ ಕಾಫಿ ಇಳುವರಿ ಕುಂಠಿತವಾಯಿತು ಎನ್ನುತ್ತಾರೆ ಅಲ್ಲಿನ ಬೆಳೆಗಾರ ಪುಳ್ಳಂಗಡ ನಟೇಶ್. ಮುಂದಿನ ವರ್ಷಕ್ಕೆ ಕಾರ್ಮಿಕರಿಗೆ ನೀಡುವ ಕೂಲಿ ಹಣಕ್ಕೂ ತೊಂದರೆಯಾಗಲಿದೆ ಎಂಬ ಆತಂಕ ಅವರದು.
ತಿತಿಮತಿ ಭಾಗದಲ್ಲಿ ಒಂದು ಎಕರೆ ಕಾಫಿ ತೋಟದಲ್ಲಿ ಸರಾಸರಿ 30 ರಿಂದ 40 ಚೀಲ ಕಾಫಿ ಇಳುವರಿ ಲಭಿಸುತ್ತಿತ್ತು. ಈ ಬಾರಿ ಕೇವಲ 2ರಿಂದ 4 ಚೀಲದಷ್ಟು ಮಾತ್ರ ಸಿಗುತ್ತಿದೆ. ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರಲಿಲ್ಲ. ಪ್ರತಿ ವರ್ಷ ಸೆಪ್ಟೆಂಬರ್ನಲ್ಲಿ ಕಾಫಿ ಗಿಡಕ್ಕೆ ರಸಗೊಬ್ಬರ ನೀಡಬೇಕು. ಆದರೆ ಕಳೆದ ವರ್ಷ ಮಳೆಯ ಕೊರತೆಯಿಂದ ಗೊಬ್ಬರ ಹಾಕಲಾಗಲಿಲ್ಲ. ಇದರಿಂದ ಗಿಡದ ರೆಂಬೆಗಳೂ ಬೆಳೆಯಲಿಲ್ಲ. ಹೀಗಾಗಿ ಹೂಬಿಡುವದೂ ಕಡಿಮೆಯಾಯಿತು ಎನ್ನುತ್ತಾರೆ ತಿತಿಮತಿ ನೋಕ್ಯ ಗ್ರಾಮದ ಚೆಪ್ಪುಡೀರ ಕಾರ್ಯಪ್ಪ.
ಕಳೆದ ಜನವರಿಯಲ್ಲಿ ಮಳೆ ಬಿದ್ದು ಉತ್ತಮ ಹೂ ಬಿಟ್ಟರೂ ಕೂಡ ‘ಬ್ಯಾಕಿಂಗ್ ಶವರ್’ ಇಲ್ಲದೆ ಹೂ ನಿಲ್ಲಲಿಲ್ಲ. ಭೂಮಿಯಲ್ಲಿ ತೇವಾಂಶ ಇಲ್ಲದ ಕಾರಣ ಹೂವೆಲ್ಲ ಉದುರಿ ಹೋಯಿತು. ಇದರ ಪರಿಣಾಮ ಕಾಫಿ ಇಳುವರಿ ಮೇಲೆ ಉಂಟಾಯಿತು ಎಂಬ ಅಭಿಪ್ರಾಯ ಅವರದು.
ಕಾಫಿ ಕೊಯ್ಲು ಬಂತೆಂದರೆ ಎಲ್ಲರ ಮನೆ ಮುಂದೆ ಕಾಫಿ ರಾಶಿ ಬೀಳುತ್ತಿತ್ತು. ಕಾಫಿ ಕೊಯ್ಲಿಗೆ ಬಂದ ಕಾರ್ಮಿಕರು ಎಲ್ಲೆಂದರಲ್ಲಿ ಕಂಡು ಬರುತ್ತಿದ್ದರು. ಈ ಬಾರಿ ಕಾರ್ಮಿಕರು ಕಂಡು ಬರುತ್ತಿಲ್ಲ. ಕಾಫಿ ರಾಶಿಯೂ ಕಾಣುತ್ತಿಲ್ಲ. ಜನವರಿ ಬಂತೆಂದರೆ ಎಲ್ಲರ ಬಾಯಲ್ಲೂ ಕಾಫಿ ಕೆಲಸ ಆಯ್ತ ಎಂದೇ ಕೇಳುತ್ತಿದ್ದರು. ಈಗ ಅಂತಹ ಮಾತೆ ಇಲ್ಲ. ಯಾರಲ್ಲಿ ಕೇಳಿದರೂ ಒಂದೇ ಮಾತು ಈ ವರ್ಷ ಕಾಫಿಯೇ ಇಲ್ಲ ಎಂಬದು. ಹವಾಮಾನದ ವೈಪರೀತ್ಯ ಇಂತಹ ಆತಂಕವನ್ನು ಸೃಷ್ಟಿಮಾಡಿದೆ.