ಮಡಿಕೇರಿ, ಜ. 15: ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ತಾ. 16 (ಇಂದು) ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಮೌಖಿಕ ಆದೇಶದ ಮೂಲಕ ಸ್ಥಗಿತಗೊಳಿಸಿರುವ ಕೊಡವ ಕುಲಶಾಸ್ತ್ರ ಅಧ್ಯಯನವನ್ನು ಮುಖ್ಯಮಂತ್ರಿಗಳು ತಮ್ಮ ವಿವೇಚನೆಯಡಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕೊಡವರಿಗೆ ಬುಡಕಟ್ಟು ಸ್ಥಾನ ಮಾನ ನೀಡುವದು ಕೊಡವರ ಭಾವನೆ, ಆಶೋತ್ತರ, ವಿಚಾರ ಧಾರೆಗಳಿಗೆ ಸಾಕ್ಷಿ ಪ್ರಜ್ಞೆಯಾದ ಹಕ್ಕಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ಕೊಡವರ ಹಕ್ಕೊತ್ತಾಯವನ್ನು ಯಾರು ಕೂಡ ಅಣಕಿಸಬಾರದೆಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿರುವದರಿಂದ ನೀತಿ ಸಂಹಿತೆ ಜಾರಿಯಾಗುವದಕ್ಕೆ ಮೊದಲೇ ಅಧ್ಯಯನ ಪುನರಾರಂಭಕ್ಕೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರ ತಕ್ಷಣ ಮೂರು ತಾಲೂಕುಗಳಿಗೆ ಅಧಿಕಾರಿಗಳ ಮೂರು ತಂಡಗಳನ್ನು ಕಳುಹಿಸಿಕೊಡಬೇಕು. ಮುಂದಿನ 20 ದಿನಗಳ ಒಳಗಾಗಿ ಅಧ್ಯಯನವನ್ನು ಪೂರ್ಣಗೊಳಿಸಿ ತಾ. 31ಕ್ಕೂ ಮೊದಲು ಕ್ಯಾಬಿನೆಟ್ ತೀರ್ಮಾನವನ್ನು ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕೊಡವರ ಪರ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಕಾಟುಮಣಿಯಂಡ ಉಮೇಶ್ ಹಾಗೂ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.