ವೀರಾಜಪೇಟೆ, ಜ. 15: ಪತಿ ಪತ್ನಿಯರ ನಡುವೆ ನಡೆದ ಜಗಳ ವಿಕೋಪಕ್ಕೇರಿದಾಗ ಪತಿ ಸಿಟ್ಟಿನಿಂದ ಮರದ ಸ್ಟೂಲ್‍ನಿಂದ ಪತ್ನಿಯ ತಲೆಗೆ ಹೊಡೆದು ಗಂಭೀರ ಗಾಯದಿಂದ ಪತ್ನಿ ಸಾವನ್ನಪ್ಪಿರುವದಾಗಿ ಸಿದ್ದಾಪುರ ಪೊಲೀಸರು ಕಾರ್ಮಿಕ ಮುಲಿಯಾಸ್ ಮುಂಡಾನ ವಿರುದ್ಧ ಕೊಲೆ ಆರೋಪ ದಾಖಲಿಸಿದ್ದು ವಿಚಾರಣೆ ನಡೆಸಿದ ಇಲ್ಲಿನ ಅಪರ ಹಾಗೂ ಎರಡನೇ ಸೆಷನ್ಸ್ ನ್ಯಾಯಾಧೀಶ ಮೋಹನ್ ಪ್ರಭು ಪ್ರಕರಣದ ಸಾಕ್ಷ್ಯಾಧಾರಗಳು ಸಾಬೀತಾಗದ್ದರಿಂದ ಆತನನ್ನು ದೋಷ ಮುಕ್ತನೆಂದು ತೀರ್ಪು ನೀಡಿ ಕೊಲೆ ಆರೋಪದಿಂದ ಬಿಡುಗಡೆ ಗೊಳಿಸಿದ್ದಾರೆ.
ಸಿದ್ದಾಪುರ ಬಳಿಯ ಹಚ್ಚಿನಾಡು ಗ್ರಾಮದ ಐನಂಡ ಚೇತನ್ ಅವರ ಲೈನು ಮನೆಯಲ್ಲಿ ವಾಸವಿದ್ದ ಕಾರ್ಮಿಕ ಮುಲಿಯಾಸ್ ಮುಂಡಾ (35) ತಾ. 13.3.2017 ರಂದು ರಾತ್ರಿ ಪತ್ನಿ ಬೀನಾ ಮುಂಡಾ (28) ನಡುವೆ ಜಗಳ ಉಂಟಾದಾಗ ಮಧ್ಯ ರಾತ್ರಿ ಮುಲಿಯಾಸ್ ಮರದ ಸ್ಟೂಲ್‍ನ್ನು ಬಳಸಿ ಪತ್ನಿಯನ್ನು ಕೊಲೆ ಮಾಡಿದ್ದು ಮಾರನೇ ದಿನ ಬೆಳಿಗ್ಗೆ ಗೊತ್ತಾಗಿದೆ. ಕಾಫಿ ತೋಟದ ರೈಟರ್ ತಾ. 14 ರಂದು ಮನೆಯಲ್ಲಿ ಬೀನಾಳ ಮೃತದೇಹವನ್ನು ನೋಡಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ಮುಲಿಯಾಸ್ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಪತಿ ಪತ್ನಿಯರಿಬ್ಬರು ಪಶ್ಚಿಮ ಬಂಗಾಳದ ನಿವಾಸಿಗಳಾಗಿದ್ದು ಆರು ತಿಂಗಳ ಹಿಂದೆ ಕಾರ್ಮಿಕರುಗಳಾಗಿ ತೋಟದ ಕೆಲಸಕ್ಕೆ ಸೇರಿದ್ದರು. ಮಡಿಕೇರಿ ಸರ್ಕಲ್ ಇನ್ಸ್‍ಪೆಕ್ಟರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪಿ ಪರ ತಾಲೂಕು ಕಾನೂನು ಸೇವಾ ಸಮಿತಿಯ ಪ್ಯಾನಲ್ ಅಡ್ವೋಕೇಟ್ ಹಾಗೂ ಇಲ್ಲಿನ ಎರಡನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ರಿಮಾಂಡ್ ಅವಧಿಯ ವಕೀಲ ಕೀತಿಯಂಡ ಸಿ. ಪ್ರದ್ಯುಮ್ನ ವಾದಿಸಿದರು.