ಯೋಜನೆ ಮುಂದುವರೆಸಲು ತಾರಾ ಅಯ್ಯಮ್ಮ ಮನವಿ

ಗೋಣಿಕೊಪ್ಪಲು, ಜ. 13: ಕೇಂದ್ರ ಸರ್ಕಾರವು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ ಒಟ್ಟು ರೂ. 205 ಕೋಟಿ ಸಹಾಯಧನವನ್ನು ವಿತರಿಸಿದ್ದು ಇದು ಯುಪಿಎ ಸರ್ಕಾರದ ಯೋಜನೆಯಾಗಿದೆ. ಆದರೆ ಇದೀಗ ನರೇಂದ್ರ ಮೋದಿ ಸರ್ಕಾರ ಕಾಫಿ ಅಭಿವೃದ್ಧಿ ಯೋಜನೆಗೆ ಯಾವದೇ ತೀರ್ಮಾನ ಕೈಗೊಂಡಿರುವದಿಲ್ಲ. ಯು.ಪಿ.ಎ. ಸರಕಾರದ ಸಹಾಯಧನ ಯೋಜನೆಯನ್ನು ಮುಂದುವರೆಸುವಂತಾಗಬೇಕು ಎಂದು ಮಾಜಿ ಕಾಫಿ ಮಂಡಳಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ತಾರಾ ಅಯ್ಯಮ್ಮ, ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ಸಹಾಯಧನ ಯೋಜನೆ ಮಾರ್ಚ್, 2017ಕ್ಕೆ ಅಂತ್ಯಗೊಂಡಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕಾಫಿ ಕೃಷಿಕರಿಗೆ ಯಾವದೇ ಯೋಜನೆ ಘೋಷಣೆ ಮಾಡಿಲ್ಲ ಎಂದು ಹೇಳಿದರು.

ಭಾರತದಲ್ಲಿ ಒಟ್ಟು 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಉತ್ಪಾದನೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲಿ ಶೇ. 79 ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ಶೇ. 49 ರಷ್ಟು ಕಾಫಿ ಉತ್ಪಾದನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಹವಾಮಾನ ವೈಪರೀತ್ಯ, ಕಾಫಿ ದರದಲ್ಲಿ ಏರುಪೇರು ಹಾಗೂ ಕಾರ್ಮಿಕರ ಸಮಸ್ಯೆ ಇತ್ಯಾದಿ ಕಾರಣಗಳಿಂದ ಕಾಫಿ ಬೆಳೆಗಾರರು ತೊಂದರೆಯಲ್ಲಿ ಸಿಲುಕಿದ್ದಾರೆ. 2010 ರಲ್ಲಿ ಕಾಫಿ ಬೆಳೆಗಾರರಿಗೆ ಯುಪಿಎ ಸರ್ಕಾರ 448.66 ಕೋಟಿ ಕಾಫಿ ಸಾಲ ಮನ್ನಾ ಪ್ಯಾಕೇಜ್ ಘೋಷಣೆ ಮಾಡಿ ಅನುಷ್ಟಾನಗೊಳಿಸಲಾಯಿತು. ಇದೀಗ ಕಳೆದ 5 ವರ್ಷದ ಅವಧಿಯಲ್ಲಿ 12 ನೇ ಪಂಚವಾರ್ಷಿಕ ಯೋಜನೆ ಅನ್ವಯ ಬೆಳೆಗಾರರಿಗೆ ರೂ. 484 ಕೋಟಿ ಸಹಾಯಧನ ವಿತರಣೆ ಮಾಡಲಾಗಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ಒಳಗೊಂಡಂತೆ ಸುಮಾರು ರೂ. 20.15 ಕೋಟಿ ಸಹಾಯಧನದ ಲಾಭವನ್ನು ಬೆಳೆಗಾರರು ಹೊಂದಿಕೊಂಡಿದ್ದರೆ, ವೀರಾಜಪೇಟೆ ತಾಲೂಕಿನಲ್ಲಿ ರೂ. 19.09 ಕೋಟಿ ಸಹಾಯಧನದ ಲಾಭ ಬೆಳೆಗಾರರಿಗೆ ಲಭ್ಯವಾಗಿದೆ. ಯೋಜನೆಯಲ್ಲಿ ಬಿಡುಗಡೆಯಾದ ಹಣ ಎಲ್ಲ ಬೆಳೆಗಾರರಿಗೂ ಲಭ್ಯವಾಗಲಿದ್ದು, ಇನ್ನೂ ಸಹಾಯಧನ ಸಿಗದಿರುವ ಬೆಳೆಗಾರರಿಗೆ ಮುಂದೆ ಕಾಫಿ ಮಂಡಳಿ ಮೂಲಕ ವಿತರಣೆಯಾಗಲಿದೆ ಎಂದು ತಾರಾ ಅಯ್ಯಮ್ಮ ಮಾಹಿತಿ ನೀಡಿದರು.

ಹೊಸ ಕಾಫಿ ತೋಟ ಅಭಿವೃದ್ಧಿ, ಗೋದಾಮು, ಕಾಫಿ ಕಣ, ಕೆರೆ ಅಭಿವೃದ್ಧಿ, ನೀರಾವರಿ, ಕಾಫಿ ಯಂತ್ರೋಪಕರಣ ಖರೀದಿ, ಸಂಸ್ಕರಣಾ ಕೇಂದ್ರ ಇತ್ಯಾದಿಗಳಿಗೆ ಶೇಕಡಾವಾರು ಸಹಾಯಧನ ನೀಡಲಾಗುತ್ತಿದ್ದು ಇದೀಗ ಯೋಜನೆಯನ್ನು ಮುಂದುವರೆಸುವಂತೆ ತಾ. 17 ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡುವದಾಗಿ ತಾರಾ ಅಯ್ಯಮ್ಮ ತಿಳಿಸಿದ್ದಾರೆ.

ಕಾಫಿ ಮಂಡಳಿಯನ್ನು ರದ್ದುಗೊಳಿಸುವ ಅಥವಾ ಟೀ ಮಂಡಳಿ, ಸಾಂಬಾರ ಮಂಡಳಿಯೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಯೂ ಕೇಂದ್ರದಲ್ಲಿದ್ದು, ಕಾಫಿ ಮಂಡಳಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದೇ ಸಂದರ್ಭ ಮನವಿ ಮಾಡುವದಾಗಿಯೂ ಅವರು ತಿಳಿಸಿದ್ದಾರೆ.

- ಟಿ.ಎಲ್. ಶ್ರೀನಿವಾಸ್