ಗೋಣಿಕೊಪ್ಪಲು,ಜ.13: ಬೆಂಗಳೂರಿನ ಪಂಚತಾರಾ ಹೋಟೆಲ್ ಲಲಿತ್ ಅಶೋಕ್ನಲ್ಲಿ ಇಂಡಿಯಾ ಕಾಫಿ ಟ್ರಸ್ಟ್, ಭಾರತೀಯ ಕಾಫಿ ಮಂಡಳಿ ಸಹಭಾಗಿತ್ವದಲ್ಲಿ , ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ, ಟಾಟಾ ಕಾಫಿ ಲಿ., ಬ್ರೂ ಕಾಫಿ ಕಂಪೆನಿ ಇತ್ಯಾದಿ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 7 ನೇ ಭಾರತ-ಅಂತರ್ರಾಷ್ಟ್ರೀಯ ಕಾಫಿ ಹಬ್ಬ ತಾ.16 ರಿಂದ ಆರಂಭಗೊಳ್ಳಲಿದೆ.ಪ್ರಮುಖ ಕಾಫಿ ಉತ್ಪಾದಕಾ ರಾಷ್ಟ್ರ ಬ್ರೆಜೀಲ್, ಕೊಲಂಬಿಯಾ, ಸ್ವಿಟ್ಜರ್ಲ್ಯಾಂಡ್, ವಿಯಟ್ನಾಮ್, ಯೂರೋಪ್ ದೇಶಗಳಿಂದಲೂ ಸುಮಾರು 100ಕ್ಕೂ ಅಧಿಕ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಕೊಡಗು, ಚಿಕ್ಕಮಗಳೂರು, ಹಾಸನ ಒಳಗೊಂಡಂತೆ 300ಕ್ಕೂ ಅಧಿಕ ಕಾಫಿ ಬೆಳೆಗಾರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಇಂಡಿಯಾ ಕಾಫಿ ಟ್ರಸ್ಟ್ನ ಅಧ್ಯಕ್ಷ ಅನಿಲ್ಕುಮಾರ್ ಭಂಡಾರಿ ತಿಳಿಸಿದ್ದಾರೆ. ಕೊಡಗಿನ ಕಾಫಿ ಬೆಳೆಗಾರರೂ ಇದರ ಸದುಪಯೋಗ ಹೊಂದುವಂತೆ ಅವರು ಮನವಿ ಮಾಡಿದ್ದಾರೆ.
ಕಾಫಿ ಕೊಯ್ಲು, ಕಾಫಿ ರೋಸ್ಟಿಂಗ್ ಪದ್ಧತಿ, ಕಾಫಿಯಿಂದ ಉತ್ಪಾದಿಸುವ ವಿವಿಧ ಉತ್ಪನ್ನಗಳು, ಕಾಫಿ ಉದ್ಯಮದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ, ಕಾಫಿ ಪ್ರವಾಸೋದ್ಯಮ, ಕಾಫಿ ರಸಪ್ರಶ್ನೆ, ಕಾಫಿ ಗಾಲ್ಫ್ ಅಂತರ್ರಾಷ್ಟ್ರೀಯ ಮಟ್ಟದ ಪಂದ್ಯಾಟ ಈ ಬಾರಿಯ ವೈಶಿಷ್ಟ್ಯವಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ತಾ. 17 ರಂದು 7ನೇ ಕಾಫಿ ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಅತಿಥಿಗಳಾಗಿ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಅಂತರ್ರಾಷ್ಟ್ರೀಯ ಕಾಫಿ ಸಂಘಟನೆಯ ಉಪನಿರ್ದೇಶಕ ಜೋಸ್ ಸೆಟ್ಟೆ, ಹಿಂದೂಸ್ಥಾನ್ ಯೂನಿಲೀವರ್ನ ಫುಡ್ ಅಂಡ್ ರಿಫ್ರೆಶ್ಮೆಂಟ್ ವಿಭಾಗದ ಉಪ ನಿರ್ದೇಶಕ ಸುಧೀರ್ ಸೀತಾಪತಿ, ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಇಂಡಿಯಾ ಕಾಫಿ ಟ್ರಸ್ಟ್ನ ಕಾಫಿ ಲ್ಯಾಬ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುನಾಲಿನಿ ಮೆನನ್ ಮುಂತಾದವರು ಪಾಲ್ಗೊಳ್ಳಲಿ ರುವದಾಗಿ ಅನಿಲ್ಕುಮಾರ್ ಭಂಡಾರಿ ತಿಳಿಸಿದ್ದಾರೆ.
ತಾ.18 ರಂದು ಸಂಜೆ ದೇಶದ ಅತ್ಯುತ್ತಮ ಕಾಫಿ ತೋಟ, ರೋಬಸ್ಟಾ ಹಾಗೂ ಅರೇಬಿಕಾ ಕಾಫಿ ಗುಣಮಟ್ಟದ ಉತ್ಪಾದನೆ, ರಫ್ತುದಾರ ಕಂಪೆನಿ ಇತ್ಯಾದಿಗಳಿಗೆ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವಿದೆ. ಸುಮಾರು 7 ಕಾರ್ಯಾಗಾರಗಳು ನಡೆಯಲಿದ್ದು, ಕಾಫಿ ವಸ್ತುಪ್ರದರ್ಶನವೂ ಈ ಬಾರಿ ವಿಭಿನ್ನವಾಗಿ ಮೂಡಿಬರಲಿದೆ.
ಕಾಫಿ ಹಬ್ಬ, ಕಾರ್ಯಾಗಾರ ಇತ್ಯಾದಿಗಳಿಗೆ ಪ್ರತ್ಯೇಕ ಪ್ರತಿನಿಧಿ ಶುಲ್ಕವಿದ್ದು ಬೆಂಗಳೂರು ಹೈಗ್ರೌಂಡ್ಸ್ ನ ಬೆಂಗಳೂರು ಗಾಲ್ಫ್ ಮೈದಾನದಲ್ಲಿ ನಡೆಯುವ
(ಮೊದಲ ಪುಟದಿಂದ) ಅಂತರ್ರಾಷ್ಟ್ರೀಯ ಕಾಫಿ ಗಾಲ್ಫ್ ಚಾಂಪಿಯನ್ಶಿಪ್ನಲ್ಲಿ ಉಚಿತವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಫಿಸಲಾಗಿದೆ. ಟಾಟಾ ಕಾಫಿ ಕಂಪೆನಿಯು ಗಾಲ್ಫ್ ಟೂರ್ನಿಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.ತಾ.18 ರಂದು ಅಪರಾಹ್ನ 4.30 ರಿಂದ 5.30ರ ವರೆಗೆ ಕಾಫಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಒಟ್ಟಿನಲ್ಲಿ ಈ ಬಾರಿಯ ಕಾಫಿ ಹಬ್ಬದಲ್ಲಿ ಸಾವಿರಕ್ಕೂ ಅಧಿಕ ಪ್ರತಿನಿಧಿಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸ ಲಾಗಿದೆ ನಾಲ್ಕು ದಿನಗಳ ಕಾಫಿ ಹಬ್ಬದ ನಿರ್ವಹಣಾ ಜವಾಬ್ದಾರಿ ಯನ್ನು ‘ಎಂ.ಎಂ.ಆಕ್ಟೀವ್ ಈವೆಂಟ್ ಮ್ಯಾನೇಜ್ಮೆಂಟ್’ಗೆ ವಹಿಸಲಾಗಿದೆ. ಎಂದು ಇಂಡಿಯಾ ಕಾಫಿ ಟೃಸ್ಟ್ ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಭಾರತದ ಕಾಫಿ ಉತ್ಪಾದನೆ 3.16 ಲಕ್ಷ ಮೆಟ್ರಿಕ್ ಟನ್
ಭಾರತದಲ್ಲಿ ಒಟ್ಟು 3,16,710 ಮೆಟ್ರಿಕ್ ಟನ್ ಕಾಫಿ ಬೆಳೆಯಲಾಗುತ್ತಿದೆ ಎಂದು ಇತ್ತೀಚೆಗಿನ ವರದಿಯ ಮಾಹಿತಿಯನ್ನು ಮಾಜಿ ಕಾಫಿ ಮಂಡಳಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ‘ಶಕ್ತಿ’ಗೆ ನೀಡಿದ್ದಾರೆ. ಬೆಂಗಳೂರು, ಮುಂಬೈ ಹಾಗೂ ನವದೆಹಲಿಯಲ್ಲಿನ ಕಾಫಿ ಉತ್ಸವದಲ್ಲಿ ತಾನೂ ಪಾಲ್ಗೊಂಡಿದ್ದು, ಕಾಫಿ ಬೆಳೆಗಾರರಿಗೆ ಇದು ಉಪಯುಕ್ತ ಮಾಹಿತಿ ನೀಡುತ್ತದೆ. ಭಾರತದ ಆಂತರಿಕ ಕಾಫಿ ಬಳಕೆಯನ್ನು ಹೆಚ್ಚಿಸಲು ಹಾಗೂ ಭಾರತದ ಕಾಫಿಯನ್ನು ವಿದೇಶಿಯರಿಗೆ ಪರಿಚಯಿಸುವ ಸಲುವಾಗಿ ಭಾರತ ಅಂತರಾಷ್ಟ್ರೀಯ ಕಾಫಿ ಹಬ್ಬವನ್ನು ಎರಡು ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದೆ ಎಂದು ತಾರಾ ಅಯ್ಯಮ್ಮ ತಿಳಿಸಿದ್ದು, ಕೊಡಗಿನ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ. ಭಾರತದಲ್ಲಿ ಒಟ್ಟು 96,200 ಮೆಟ್ರಿಕ್ ಟನ್ ಅರೇಬಿಕಾ ಹಾಗೂ 2,20,500 ಮೆಟ್ರಿಕ್ ಟನ್ ರೋಬಸ್ಟಾ ಕಾಫಿ ಉತ್ಪಾದನೆಯಾಗುತ್ತಿದೆ.
ಕರ್ನಾಟಕ ರಾಷ್ಟ್ರದಲ್ಲಿಯೇ ಅತ್ಯಧಿಕ ಕಾಫಿ ಬೆಳೆಯುತ್ತಿದ್ದು 78,650 ಮೆಟ್ರಿಕ್ ಟನ್ ಅರೇಬಿಕಾ ಹಾಗೂ 1,72,870 ಮೆ.ಟನ್ ರೋಬಸ್ಟಾ ಉತ್ಪಾದನೆ ಒಳಗೊಂಡಂತೆ ಒಟ್ಟು 2,51,520 ಮೆ.ಟನ್ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಇದರಲ್ಲಿ ಕೊಡಗು ಜಿಲ್ಲೆ ಅತ್ಯಧಿಕ ಅಂದರೆ 1,24,150 ಮೆಟ್ರಿಕ್ ಟನ್ ಕಾಫಿ ಉತ್ಪಾದಿಸುತ್ತಿದೆ. ಅರೇಬಿಕಾ 17,400 ಮೆ.ಟನ್ ಹಾಗೂ ರೋಬಸ್ಟಾ 1,06,750 ಮೆಟ್ರಿಕ್ ಉತ್ಪಾದನೆ ಕೊಡಗಿನ ಪಾಲಾಗಿದೆ.
ಭಾರತದ 4,49,357 ಹೆಕ್ಟೇರ್ ಪ್ರದೇಶದಲ್ಲಿ ಪ್ರಸ್ತುತ ಕಾಫಿ ಬೆಳೆಯಲಾಗುತ್ತಿದೆ. ಇದರಲ್ಲಿ ಕರ್ನಾಟಕದ 2,44,785 ಹೆಕ್ಟೇರ್ ಪ್ರದೇಶ, ಅದರಲ್ಲಿಯೂ ಕೊಡಗಿನ 1,07,089 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ದೇಶದ ಒಟ್ಟು ಕಾಫಿ ಉತ್ಪಾದನೆಯಲ್ಲಿ ರಾಜ್ಯವು ಶೇ.79ರಷ್ಟು ಹಾಗೂ ಕೊಡಗು ಜಿಲ್ಲೆ ಶೇ.49 ರಷ್ಟು ಕಾಫಿ ಉತ್ಪಾದನೆ ಮಾಡುತ್ತಿದೆ ಎಂದು ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
-ವರದಿ: ಟಿ.ಎಲ್.ಶ್ರೀನಿವಾಸ್