ಮಡಿಕೇರಿ, ಜ. 13: ಕೊಡಗಿನಲ್ಲಿ ಜಾತಿಯ ನೆಲೆಯಲ್ಲಿ ರಾಜಕಾರಣದೊಂದಿಗೆ ಸಮಾಜವನ್ನು ಒಡೆಯುವ ಯತ್ನ ಖಂಡಿಸಿ, ತಾ. 21 ರಂದು ಕೊಡಗಿನ ಕುಲಮಾತೆ, ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿಯಿಂದ, ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ತನಕ ಪಾದಯಾತ್ರೆ ಕೈಗೊಂಡಿರುವದಾಗಿ ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಘೋಷಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮತದಾರರಲ್ಲಿ ಜಾಗೃತಿ ಮೂಡಿಸಲು ಈ ನಿರ್ಧಾರ ತೆಗೆದುಕೊಂಡಿದ್ದು, ಪ್ರಬಲ ಜನಾಂಗ ಮಾತ್ರವಲ್ಲದೆ ಎಲ್ಲ ಸಮುದಾಯ ಒಳಗೊಂಡು ಪಾದಯಾತ್ರೆ ನಡೆಸುತ್ತಿರುವದಾಗಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಅಭಿವೃದ್ಧಿಗೆ ಮಾರಕವಾಗುವಂತಹ ಜಾತಿ ಆಧಾರಿತ, ರಾಜಕೀಯ ಧುರೀಣರ ಹೇಳಿಕೆಗಳು ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿ ಜಿಲ್ಲೆಯು ಅನಾದಿಕಾಲದಿಂದ ಬಂದಿರತಕ್ಕ ಸಾಮರಸ್ಯ ಜೀವನದ ಅಡಿಪಾಯವನ್ನೇ ಬುಡಮೇಲು ಮಾಡುವಂತಹ ಚಿಂತನೆಗಳಿಗೆ ಕಾರಣವಾಗುತ್ತಿವೆ ಎಂದು ವಿಷಾದಿಸಿದ್ದಾರೆ.

ಕೊಡಗಿನಲ್ಲಿ ಕೇವಲ ಕೊಡವ ಹಾಗೂ ಗೌಡ ಜನಾಂಗದವರು ಮಾತ್ರ ರಾಜಕೀಯದಲ್ಲಿ ಟಿಕೆಟ್ ಪಡೆಯ ಬೇಕೆಂಬ ಆಸೆ ಅರ್ಥಹೀನವಾಗಿದ್ದು, ರಾಜಕೀಯ ಪಕ್ಷಗಳು ಜಾತಿರಹಿತವಾಗಿ ಜನರ ಆಶೋತ್ತರಗಳನ್ನು ಈಡೇರಿಸುವ ಸೂಕ್ತ ವ್ಯಕ್ತಿಗೆ ವಿಧಾನಸಭಾ ಟಿಕೆಟ್ ನೀಡಬೇಕಲ್ಲದೆ ಜಾತಿಯನ್ನು ಬೆಂಬಲಿಸಿ ತೀರ್ಮಾನ ತೆಗೆದು ಕೊಂಡರೆ,

(ಮೊದಲ ಪುಟದಿಂದ) ಅದು ನಿರೀಕ್ಷೆಗೂ ಮೀರಿದ ಗೊಂದಲಗಳಾಗಿ ಮಾರ್ಪಾಡುವದರಲ್ಲಿ ಸಂಶಯವಿಲ್ಲ ಎಂದು ನೆನಪಿಸಿದ್ದಾರೆ.

ಜಾತೀಯ ಆಧಾರದಲ್ಲಿ ಕೊಡಗಿನ ಜನತೆಯನ್ನು ಒಡೆಯುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ. ಇದು ಎಂದೆಂದಿಗೂ ಆಗಬಾರದು. ಈತನಕ ಕೊಡಗಿನ ಜನತೆ ಸಾಮರಸ್ಯದಿಂದ ಜೀವನ ನಡೆಸುತ್ತಿದ್ದರೂ ಅದಕ್ಕೆ ಯಾವದೇ ಕಳಂಕ ಬಾರದಂತೆ ನಡೆದುಕೊಳ್ಳಬೇಕಾದುದು ರಾಜಕೀಯ ವ್ಯಕ್ತಿಗಳ ಹಾಗೂ ಸಮಾಜದ ಎಲ್ಲಾ ವರ್ಗಗಳ ಜನತೆಯ ಕರ್ತವ್ಯ ಎಂದು ತಿಳಿದುಕೊಳ್ಳಬೇಕು.

ಜಾತಿ ಆಧಾರದ ಟಿಕೆಟ್ ಎಂಬದಾಗಿ ನಿರ್ಣಯಿಸುವದಾದರೆ, ಕೊಡಗಿನಲ್ಲಿ ನೂರಾರು ಜಾತಿ ಪಂಗಡಗಳ ಜನ ವಾಸವಿದ್ದಾರೆ. ಅವರೆಲ್ಲರೂ ತಮ್ಮ ಜಾತಿಯವರಿಗೆ ಟಿಕೆಟ್ ನೀಡಲು ತೀರ್ಮಾನಿಸಿ ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಿದರೆ ಪರಿಸ್ಥಿತಿ ಏನಾಗಬಹುದೆಂದು ಮುಖಂಡರು ಯೋಚಿಸಿದ್ದಾರೆಯೇ? ಎಂದು ಮಣಿ ಉತ್ತಪ್ಪ ಪ್ರಶ್ನಿಸಿದ್ದಾರೆ.

ನಮ್ಮ ರಾಷ್ಟ್ರ, ರಾಜ್ಯ, ಜಿಲ್ಲೆಯ ಜಲ, ನೆಲ, ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ಇರುವವರಿಗೆ ಪಕ್ಷದ ಟಿಕೆಟ್ ಕೊಡಬೇಕೆಂದು ಜನಪರ ಹೋರಾಟ ಸಮಿತಿ ಆಗ್ರಹಿಸುತ್ತದೆ. ಈ ರೀತಿಯ ಜಾತಿ ಆಧಾರದ ಟಿಕೆಟ್ ಬಗ್ಗೆ ಗೊಂದಲಗಳ ಹೇಳಿಕೆಗಳನ್ನು ಖಂಡಿಸಿ, ಜಾತಿರಹಿತ ಜನಸೇವೆಯ ಆದ್ಯತೆಯ ಮೇಲೆ ಟಿಕೆಟ್ ಕೊಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿಯ ಸದಸ್ಯರ ನೇತೃತ್ವದಲ್ಲಿ ತಲಕಾವೇರಿಯಿಂದ ಮಡಿಕೇರಿಯ ಓಂಕಾರೇಶ್ವರ ದೇವಾಲಯದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುವದು. ಸಮಾನ ಮನಸ್ಕ ನಾಗರಿಕರ ಸಹಕಾರವನ್ನು ಬಯಸುವದಾಗಿ ಸಮಿತಿಯು ಪದಾಧಿಕಾರಿಗಳ ಜಂಟಿ ಹೇಳಿಕೆಯಲ್ಲಿ ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದ್ದಾರೆ.