ಮಡಿಕೇರಿ, ಜ. 13: ಗೌಡ ಕುಟುಂಬಗಳ ನಡುವೆ ಈ ಬಾರಿ ನಡೆಯಲಿರುವ ಚೆರಿಯಮನೆ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಜಂಬರದ ಲಾಂಛನ ಬಿಡುಗಡೆ ಸಮಾರಂಭ ಎಂದು ಕೆಳಗಿನ ಗೌಡ ಸಮಾಜದಲ್ಲಿ ನಡೆಯಿತು.ಸಮಾರಂಭವನ್ನು ಹಿರಿಯರಾದ ಕೇಕಡ ಚಂದ್ರಮ್ಮ ಉದ್ಘಾಟಿಸಿದರು. ಲಾಂಛನವನ್ನು ಚೆರಿಯಮನೆ ಕುಟುಂಬದ ಪಟ್ಟೆದಾರರಾದ ಚೆರಿಯಮೆನ ಕೆಂಚಪ್ಪ, ಚೆರಿಯಮನೆ ಬೆಳ್ಯಪ್ಪ ಬಿಡುಗಡೆ ಮಾಡಿದರು.ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಚೆರಿಯಮನೆ ಕ್ರಿಕೆಟ್ ಕಪ್ ಲಾಂಛನದಲ್ಲಿ ದೇವರಕಾಡು, ಪರಿಸರ ಪ್ರೇಮಿ - ಸಂರಕ್ಷಣೆ ಸಂದೇಶದೊಂದಿಗೆ ಗೌಡ ಜನಾಂಗದ ಸಂಸ್ಕøತಿಯನ್ನು ಬಿಂಬಿಸಲಾಗಿದ್ದು, ಇದು ಶ್ಲಾಘನೀಯ ಎಂದರು.
ಆರೋಗ್ಯ, ಆರ್ಥಿಕ ಸದೃಢತೆ ಮತ್ತು ಆದ್ಯಾತ್ಮಿಕ ಸ್ಥಿರತೆ ನಮ್ಮಲ್ಲಿರಬೇಕಾದರೆ ವಯಸ್ಸಿನ ಮಿತಿ ತೊರೆದು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಕ್ರೀಡಾ ಸಮಿತಿಯ ಅಧ್ಯಕ್ಷ ಚೆರಿಯಮನೆ ಡಾ|| ರಾಮಚಂದ್ರ ಹೇಳಿದರು.
ಆರೋಗ್ಯ ಕಾಪಾಡಿ ಕೊಳ್ಳಬೇಕಾದರೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ದೊಡ್ಡವರು ತಮಗೆ ವಯಸ್ಸಾಗಿದೆಯೆಂದು ಅಂಜದೆ ವಯಸ್ಸಿನ ಮಿತಿಯನ್ನು ತೊರೆದು ಪ್ರತಿನಿತ್ಯ ಯಾವದೇ ಕ್ರೀಡೆಯಲ್ಲಿ ತೊಡಗಿಕೊಳ್ಳುವದರಿಂದ ಆರೋಗ್ಯ ವಂತ ಜೀವನ ನಡೆಸ ಬಹುದು ಎಂದು ಅಭಿಪ್ರಾಯಪಟ್ಟರು.
ಈಗಿರುವ ಒಟ್ಟು 920 ಗೌಡ ಕುಟುಂಬಗಳಲ್ಲಿ 565 ಕುಟುಂಬಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು 355 ಕುಟುಂಬಗಳು ಕೊಡಗು ಜಿಲ್ಲೆಯಲ್ಲಿ ನೆಲೆಸಿವೆ. 1785ರಲ್ಲಿ ಟಿಪ್ಪುಸುಲ್ತಾನ್ ಕೊಡಗಿನ ಮೇಲೆ ಧಾಳಿ ಮಾಡಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ಹತ್ಯೆಗಳು ಮತ್ತು ಮತಾಂತರದ ಕೃತ್ಯಗಳು ನಡೆದಿವೆ. ಟಿಪ್ಪುವಿನ ಧಾಳಿಯ ನಂತರ ಆತನ ಯೋಧರು ನಡೆಸಿದ ದೌರ್ಜನ್ಯಕ್ಕೆ ಹೆದರಿದ ಚೆರಿಯಮನೆ ಕುಟುಂಬ ಭಾಗಮಂಡಲದ ಮೂಲ ಪ್ರದೇಶ ದಿಂದ ರಾಮು ಮತ್ತು ದೇರಪ್ಪ ಎಂಬ ಸಹೋದರರ ನೇತೃತ್ವದಲ್ಲಿ ಬೆಟ್ಟತೂರು ಗ್ರಾಮವನ್ನು ಪ್ರವೇಶಿಸಿದರು. ಹೀಗಾಗಿ ಚೆರಿಯಮನೆ ಕುಟುಂಬದ ಐನ್‍ಮನೆ ಬೆಟ್ಟತೂರಿನಲ್ಲಿಯೇ ಇದೆ ಎಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ದೇವರ ಕಾಡಿನ ಮಧ್ಯ ಭಾಗದಲ್ಲಿ ಊರ ದೇವತೆ ಶ್ರೀ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನವಿದೆ. ಪ್ರತಿ ಕುಟುಂಬವು ಆರಾಧಿಸುವ ಗುಳಿಗ, ಚೌಂಡಿ, ಪಾಷಾಣಮೂರ್ತಿ, ಪಂಜುರುಳಿ, ಬೀರ ಮೊದಲಾದ ದೇವತೆಗಳಿಗೆ ದೇವಸ್ಥಾನಗಳಿಲ್ಲ. ಇವು ದೇವರ ಕಾಡಿನಲ್ಲಿ ವಾಸಿಸುತ್ತವೆ ಎಂಬ ನಂಬಿಕೆ ಇರುವದರಿಂದ ಅಂತಹ ಕಾಡಿನಲ್ಲಿ ಮರಗಿಡಗಳನ್ನು ಕಡಿಯಲು ಜನರು ಹೆದರುತ್ತಾರೆ ಎಂದರು.
ಕೊಡಗು ಗೌಡ ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ಕುಮಾರ್ ಮಾತನಾಡಿ, ಕಳೆದ ಬಾರಿ ನಡೆದ ಪೈಕೇರ ಕ್ರಿಕೆಟ್ ಕಪ್‍ನಲ್ಲಿ 210 ತಂಡಗಳು ಹೆಸರು ನೋಂದಾಯಿಸಿದ್ದು, ಅದರಲ್ಲಿ 200 ತಂಡಗಳು ಭಾಗವಹಿಸಿದ್ದವು. ಆದರೆ ಈ ಬಾರಿ 250 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಈ ಕಾರ್ಯಕ್ರಮಕ್ಕೆ ಚೆರಿಯಮನೆ ಕುಟುಂಬಸ್ಥರು ಮಾತ್ರವಲ್ಲದೆ ಇಡೀ ಜನಾಂಗದವರು ಬೆಂಬಲ ನೀಡುವಂತೆ ಮನವಿ ಮಾಡಿದರು.
ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಮಾತನಾಡಿ, ಏಪ್ರಿಲ್ 15ರಿಂದ ಮೇ 10ರವರೆಗೆ ಒಟ್ಟು 17 ದಿನಗಳ ಕಾಲ ಚೆರಿಯಮನೆ ಕ್ರಿಕೆಟ್ ಹಬ್ಬ ನಡೆಯಲಿದ್ದು, ಯಾವುದೇ ಅಡೆ ತಡೆ ಬಾರದೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಳ್ಳುವಂತಾಗಲಿ ಎಂದು ಆಶಿಸಿದರು.
ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಯುವ ವೇದಿಕೆಯವರು ವ್ಯವಸ್ಥಿತವಾಗಿ ಕ್ರಿಕೆಟ್ ಹಬ್ಬ ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲರೂ ಕೈಜೋಡಿಸಬೇಕೆಂದರು. ಇದೇ ಸಂದರ್ಭ ಲಾಂಛನ ತಯಾರಿಸಿದ ಯುವ ವೇದಿಕೆ ನಿರ್ದೇಶಕ ಪುದಿಯನೆರವನ ರಿಶಿತ್ ಮಾದಯ್ಯ ಅವರನ್ನು ಸನ್ಮಾನಿಸಲಾಯಿತು.
ಚೆರಿಯಮನೆ ಗಂಗಮ್ಮ ತಂಡ ಪ್ರಾರ್ಥಿಸಿದರೆ, ಚೆರಿಯಮನೆ ಪೆಮ್ಮಯ್ಯ ನಿರೂಪಿಸಿ, ವಂದಿಸಿದರು.