ಮಡಿಕೇರಿ, ಜ. 11: ಜಿಲ್ಲಾ ಮಟ್ಟದ ವಿಕಲಚೇತನ ಮಕ್ಕಳ ಕ್ರೀಡಾಕೂಟಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಭಾಗ್ಯಲಕ್ಷ್ಮಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬಳಿಯ ಆವರಣದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವತಿಯಿಂದ ವಿಕಲಚೇತನರಿಗಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಕಲಚೇತನ ಮಕ್ಕಳು ಪಾಲ್ಗೊಂಡಿದ್ದರು.

ಸರ್ವ ಶಿಕ್ಷಣ ಅಭಿಯಾನದ ಅಧಿಕಾರಿ ಭಾಗ್ಯಲಕ್ಷ್ಮಿ ಮಾತನಾಡಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ವಿಕಲತೆ ಹೊಂದಿರುತ್ತಾರೆ. ದೈಹಿಕವಾಗಿ ವಿಕಲಚೇತನ ಮಕ್ಕಳು ಧೃತಿಗೆಡದೆ ಇತರರಂತೆ ಮುಖ್ಯ ವಾಹಿನಿಗೆ ಬರಬೇಕು ಎಂದು ಹೇಳಿದರು.

ವಿಕಲಚೇತನ ಮಕ್ಕಳು ಕ್ರೀಯಾ ಶೀಲವಾಗಿ ಮತ್ತು ಚಲನಶೀಲವಾಗಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗ ಬೇಕು ಎಂದು ಸಲಹೆ ಮಾಡಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಇದೇ 28 ರಂದು ಪ್ರಥಮ ಹಂತದ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮ ನಡೆಯಲಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೊಲಿಯೊ ಹನಿ ಹಾಕಿಸುವಂತೆ ಕೋರಿದರು.

ಮಕ್ಕಳ ಬಗ್ಗೆ ಪೊಷಕರು ಕಳಾಜಿ ವಹಿಸಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕು. ಹಾಗೆಯೇ ವಿಕಲಚೇತನ ಮಕ್ಕಳು ಕುಗ್ಗಬಾರದು, ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.

ದೈಹಿಕ ಶಿಕ್ಷಣಾಧಿಕಾರಿ ಮೃತ್ಯುಂಜಯ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ್, ಶಿಕ್ಷಕರಾದ ಡಿ.ಎಂ.ರೇವತಿ, ವೀಣಾ, ಶಾಂತ, ಇತರರು ಇದ್ದರು.