ಸಿದ್ದಾಪುರ, ಜ. 10: ಕಾಡಾನೆಗಳ ಹಿಂಡು ಮನೆಯ ಸುತ್ತಲು ದಾಂಧಲೆ ನಡೆಸಿ ಹೂವಿನ ಕುಂಡಗಳನ್ನು ಧ್ವಂಸಗೊಳಿಸಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಕರಡಿಗೋಡು ಗ್ರಾಮದ ಕಂಬಿರಂಡ ನಂದಾಗಣಪತಿ ಅವರ ಮನೆಯ ಸುತ್ತಲು ಬುಧವಾರ ಬೆಳಗಿನ ಜಾವ 3 ಗಂಟೆ ಸಮಯಕ್ಕೆ ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿ ಸುತ್ತಾಡಿ ಮನೆಯ ಹಿಂಭಾಗದಲ್ಲಿ ಹಾಗೂ ಮನೆಯ ಸುತ್ತಲಿನಲ್ಲಿ ಇಟ್ಟಿದ್ದ ಹೂವಿನ ಕುಂಡಗಳನ್ನು ಕಾಲಿನಿಂದ ತುಳಿದು ಧ್ವಂಸಗೊಳಿಸಿ ನಾಶಪಡಿಸಿವೆ.
ಈ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಕಂಬಿರಂಡ ನಂದಾಗಣಪತಿರವರ ಕಾಡಾನೆಗಳ 13 ಕಾಡಾನೆಗಳು ತನ್ನ ಕಾಫಿ ತೋಟಗಳಲ್ಲಿ ದಿನಂಪ್ರತಿ ದಾಂಧಲೆ ನಡೆಸುತ್ತಿದ್ದು ಕಾಫಿ ಗಿಡ ಹಾಗೂ ಫಸಲುಗಳನ್ನು ನಾಶಪಡಿಸುತ್ತಿವೆ. ಇದೀಗ ಕಳೆದ ರಾತ್ರಿ ಮನೆಯ ಸುತ್ತಲು ಸುತ್ತಾಡಿ 25ಕ್ಕೂ ಅಧಿಕ ಅಂಥೂರಿಯಂ ಗಿಡಗಳನ್ನು ಹಾಗೂ ಹೂವಿನ ಕುಂಡಗಳನ್ನು ತುಳಿದು ನಾಶಪಡಿಸಿದೆ ಎಂದರು. ಕಾಡಾನೆಗಳ ಉಪಟಳದಿಂದಾಗಿ ತೋಟದಲ್ಲಿ ಕಾರ್ಮಿಕರಿಗೆ ಕೆಲಸ ಮಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ತೋಟದ ಒಳಗೆ ನಡೆದಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ ಎಂದ ಅವರು ಸರ್ಕಾರವು ಕಾಡಾನೆಗಳನ್ನು ನಿಯಂತ್ರಿಸಲು ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಇದಲ್ಲದೇ ಸಿದ್ದಾಪುರದ ಕರಡಿಗೋಡು ಗ್ರಾಮದ ಮೈಸೂರು ರಸ್ತೆಯ ಮುಲ್ಲೆತೋಡು ನಿವಾಸಿ ಪಾಂಡಂಡ ರಾಜಗಣಪತಿ ತೋಟದಲ್ಲಿ ಕಾಡಾನೆಗಳ ಹಿಂಡು ಧಾಳಿ ನಡೆಸಿ ತೆಂಗಿನಮರಗಳನ್ನು ಹಾಗೂ ತಾಳೆ ಬೆಳೆಯನ್ನು ಧ್ವಂಸಗೊಳಿಸಿ ನಾಶಪಡಿಸಿವೆ. ತೋಟದಲ್ಲಿದ್ದ ಕಿರು ಸೇತುವೆಯನ್ನು ಕಾಲಿನಿಂದ ತುಳಿದು ನಾಶಪಡಿಸಿದೆ ಎಂದು ರಾಜಗಣಪತಿ ತಿಳಿಸಿದರು. ಕಳೆದ 1 ವಾರದಿಂದ ಕಾಡಾನೆಗಳು ನಿರಂತರವಾಗಿ ಕಾಫಿ ತೋಟದ ಒಳಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತ ಫಸಲುಗಳನ್ನು ಹಾನಿಗೊಳಿಸುತ್ತಿವೆ ಎಂದ ಅವರು ಕಾಫಿ ಕೊಯ್ಲು ಮಾಡಿ ಕಣದಲ್ಲಿ ಒಣ ಹಾಕಲು ಹಾಕಿದ್ದ ಕಾಫಿಗಳನ್ನು ಕಾಡಾನೆಗಳು ಬಂದು ಕಣದಿಂದಲೇ ತಿಂದು ಹಾಕಿವೆ. ಕಾಡಾನೆಗಳ ಉಪಟಳದಿಂದಾಗಿ ನಷ್ಟ ಸಂಭವಿಸಿದೆ ಎಂದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬೇಕೆಂದು ಒತ್ತಾಯಿಸಿದರು.
-ವಾಸು