ಶ್ರೀಮಂಗಲ, ಜ. 10: ಪೊನ್ನಂಪೇಟೆ ತಾಲೂಕು ಪುನರ್‍ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯ ಸ್ವರೂಪವನ್ನು 21 ಗ್ರಾ.ಪಂ ವ್ಯಾಪ್ತಿಯಲ್ಲಿ ಜನ ಜಾಗೃತಿ ಹಾಗೂ ಹಂತ ಹಂತವಾಗಿ ತೀವ್ರತರದ ಹೋರಾಟ ನಡೆಸಲು ತಾಲೂಕು ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಮತ್ತು ಹೋರಾಟದ ಸ್ವರೂಪವನ್ನು ನಿರ್ಧರಿಸಲು ಹಾಗೂ ಹೋರಾಟ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಸಭೆ ಕರೆಯಲು ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಅವರಿಗೆ ಜವಾಬ್ದಾರಿ ವಹಿಸಲಾಯಿತು.

ನಿನ್ನೆ ನಡೆದ ಪ್ರತಿಭಟನೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು. ಕಳೆದ 70 ದಿನಗಳಿಂದ ಪೊನ್ನಂಪೇಟೆ ನಾಗರಿಕ ವೇದಿಕೆ ಮತ್ತು ಪೊನ್ನಂಪೇಟೆ ತಾಲೂಕು ಪುನರ್‍ರಚನಾ ಸಮಿತಿಯ ವತಿಯಿಂದ ಶಾಂತಿಯುತ ಪ್ರತಿಭಟನೆ ನಡೆಸಿ 21 ಗ್ರಾ.ಪಂ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಬಾಗಿತ್ವದಲ್ಲಿ ರಾಜಕೀಯ ರಹಿತವಾಗಿ ಪ್ರತಿಭಟನೆಯನ್ನು ನಡೆಸುವದರ ಮೂಲಕ ಪೊನ್ನಂಪೇಟೆ ತಾಲೂಕು ರಚನೆಗೆ ಸರ್ಕಾರಕ್ಕೆ ಒತ್ತಡ ಹಾಕಲಾಯಿತು. ಇದರೊಂದಿಗೆ ಹಲವಾರು ಬಾರಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಮಾಚಯ್ಯ ಅವರ ಮುಂದಾಳತ್ವದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಪೊನ್ನಂಪೇಟೆ ತಾಲೂಕು ರಚನೆಗೆ ಬೇಕಾದಂತಹ ವಾಸ್ತವ ಸತ್ಯಾಂಶದೊಂದಿಗೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳು ಹಾಗೂ ಆರ್ಥಿಕ ಕ್ರೋಢೀಕರಣದ ಬಗ್ಗೆಯೂ ಸರ್ಕಾರಕ್ಕೆ ವರದಿ ನೀಡಿದ್ದು, ಇದರೊಂದಿಗೆ ಜಿಲ್ಲಾಡಳಿತದಿಂದ ಹಾಗೂ ವಿವಿಧ ಇಲಾಖೆಗಳಿಂದ ಸರ್ಕಾರ ಮಾಹಿತಿಯನ್ನು ಪಡೆದುಕೊಂಡು ಪೊನ್ನಂಪೇಟೆ ತಾಲ್ಲೂಕು ರಚನೆಯ ಬಗ್ಗೆ ಕೂಲಂಕಷವಾಗಿ ವಿಮರ್ಶೆ ಮಾಡಲಾಯಿತು.

ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಜಿಲ್ಲೆಗೆ ಆಗಮಿಸಿದ ಸಂದರ್ಭ ಪೊನ್ನಂಪೇಟೆ ತಾಲೂಕು ಘೋಷಣೆ ಮಾಡುತ್ತಾರೆ ಎಂಬ ಆಶಾ ಭಾವನೆಯಲ್ಲಿ ಇದ್ದ ಸಮಿತಿಯವರಿಗೆ ಮುಂದಿನ ದಿನಗಳಲ್ಲಿ ವಿಮರ್ಶಿಸಿ ಸಕಾರಾತ್ಮಕ ನಿಲುವನ್ನು ತಾಳಲಾಗುವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿಯ ಪ್ರಮುಖರಿಗೆ ಭರವಸೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮತ್ತಷ್ಟು ಒತ್ತಡ ಹಾಕುವ ನಿಟ್ಟಿನಲ್ಲಿ ಪೊನ್ನಂಪೇಟೆ ತಾಲೂಕು ಪುನರ್‍ರಚನಾ ಸಮಿತಿ ತಾಲೂಕು ರಚನೆಯನ್ನು ಜನಾಂದೋಲನವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸಮಿತಿಯ ಸಭೆಯಲ್ಲಿ ತೀರ್ಮಾನ ನಡೆಸಿ ಹಮ್ಮಿಕೊಳ್ಳಲಾಗುತ್ತದೆ ಎಂದು ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದ್ದಾರೆ.

ಈ ಸಂದರ್ಭ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಬಿ.ಪೂಣಚ್ಚ, ಉಪಾಧ್ಯಕ್ಷರಾದ ಚೆಪ್ಪುಡಿರ ಸೋಮಯ್ಯ, ಎರ್ಮುಹಾಜಿ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಚೆಪ್ಪುಡಿರ ಲಾಲ ಉತ್ತಪ್ಪ, ಮಲ್ಲಮಾಡ ಪ್ರಭು, ಮತ್ರಂಡ ಅಪ್ಪಚ್ಚು, ಮಚ್ಚಮಾಡ ಕಾರ್ಯಪ್ಪ, ಚೆಕ್ಕೆರ ಸೋಮಯ್ಯ, ಕೂಕಂಡ ಕಾವೇರಪ್ಪ, ಸಂದೇಶ ನೆಲ್ಲಿತ್ತಾಯ, ಕೊಟ್ರಮಾಡ ಬೋಪಯ್ಯ, ಪೊನ್ನಂಪೇಟೆ ಗ್ರಾ.ಪಂ ಸದಸ್ಯರಾದ ಮೂಕಳೇರ ಲಕ್ಷ್ಮಣ, ಕಳಕಂಡ ಸುಮತಿ, ಪಾನಿಕುಟ್ಟಿರ ಮಾದಪ್ಪ, ಕಾಳಿಮಾಡ ನಂಜಪ್ಪ, ಮಲ್ಲಮಾಡ ಪ್ರಭು ಪೂಣಚ್ಚ ಮುಂತಾದವರು ಹಾಜರಿದ್ದರು.