ಸೋಮವಾರಪೇಟೆ, ಜ. 10: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಹಲವು ಸುತ್ತಿನ ಮಾತುಕತೆಯ ನಂತರವೂ ಶಮನಗೊಳ್ಳದ ಪರಿಣಾಮ ಜೆಡಿಎಸ್‍ನ ಮುಂಚೂಣಿ ಘಟಕಗಳಲ್ಲಿ ಸಕ್ರಿಯರಾಗಿದ್ದ ಮುಖಂಡರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಮುಖಂಡರು, ಪಕ್ಷದ ಜಿಲ್ಲಾ ಮುಖಂಡ, ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷ ತ್ಯಜಿಸುತ್ತಿರುವದಾಗಿ ಹೇಳಿದರು.
ಜೆಡಿಎಸ್‍ನ ಮಾಜೀ ಜಿಲ್ಲಾಧ್ಯಕ್ಷ ಎಸ್.ಬಿ.ಭರತ್ ಕುಮಾರ್, ರಾಜ್ಯ ಕಾರ್ಯದರ್ಶಿ ಮತ್ತು ಮಾಜೀ ಜಿಲ್ಲಾ ಉಸ್ತುವಾರಿ ವಿ.ಎಂ.ವಿಜಯ, ಯುವ ಜೆಡಿಎಸ್‍ನ ಜಿಲ್ಲಾಧ್ಯಕ್ಷರಾಗಿದ್ದ ಅಜೀಶ್‍ಕುಮಾರ್, ಜಿ.ಪಂ. ಮಾಜೀ ಸದಸ್ಯೆ ಎನ್.ಎಸ್. ಗೀತಾ ಸೇರಿದಂತೆ ಮತ್ತಿತರರು ಪಕ್ಷದ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದೇವೆ ಎಂದು ಪ್ರಮುಖರು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಜೆಡಿಎಸ್ ಪಕ್ಷದ ಕಾರ್ಯದರ್ಶಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ್, ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಅವರ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿಯವರಿಗೆ ಸಲ್ಲಿಸಲಾಗುವದು ಎಂದರು.
ಜೆಡಿಎಸ್‍ಗಾಗಿ ಹಗಲಿರುಳು ದುಡಿದರೂ ಮಾಜಿ ಸಚಿವ ಬಿ.ಎ. ಜೀವಿಜಯ ನಮಗೆ ಅನ್ಯಾಯ ಮಾಡಿದ್ದಾರೆ. ಈ ಹಿಂದೆ ಪಕ್ಷದ ಕಾರ್ಯಚಟುವಟಿಕೆಯಿಂದ ತಟಸ್ಥರಾಗಿದ್ದ ಸಂದರ್ಭ, ಜೆಡಿಎಸ್ ನಾಯಕರು ತನ್ನ ಮನವೊಲಿಸಿ ರಾಜ್ಯ ಕಾರ್ಯದರ್ಶಿ ಹಾಗು ಜಿಲ್ಲಾ ಉಸ್ತುವಾರಿ ಹುದ್ದೆಯನ್ನು ನೀಡಿದ್ದರು. ನಂತರ ಜೀವಿಜಯ ಅವರು ನಮ್ಮ ಗಮನಕ್ಕೆ ತಾರದೆ, ನಮ್ಮ ಹುದ್ದೆಗಳಿಗೆ ಬೇರೆಯವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದರು. ಇಂತಹ ಅವಮಾನವನ್ನು ಸಹಿಸಿಕೊಂಡು ಪಕ್ಷದಲ್ಲಿ ಇರಲು ಸಾಧ್ಯವಾಗದೆ ಹೊರ ಬಂದಿದ್ದೇವೆ. ತಮ್ಮ ಬೆಂಬಲಿಗರೂ ಕೂಡ ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದರು.
ಜೆಡಿಎಸ್‍ನ ಮಾಜಿ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಮಾತನಾಡಿ, ಜೆಡಿಎಸ್ ಜಿಲ್ಲಾಧ್ಯಕ್ಷನಾಗಿದ್ದ ನನ್ನನ್ನು ಏಕಾಏಕಿ ಕೆಳಗಿಳಿಸಲಾಯಿತು. ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ನನಗೆ ಅವಮಾನ ಮಾಡಿದ್ದಾರೆ. ಜೆಡಿಎಸ್‍ನಲ್ಲಿದ್ದುಕೊಂಡು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬದು ಅರಿವಾಗಿರುವದರಿಂದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನವಿದ್ದು, ತನ್ನ ಹಿತೈಷಿಗಳೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಹೇಳಿದರು.
ಜಿಲ್ಲೆಯಾದ್ಯಂತ ಜಾತ್ಯತೀತ ಜನತಾದಳ ಕಟ್ಟಿದ ಹೆಮ್ಮೆಯಿದೆ. ಕಳೆದ ಎರಡು ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಹಿರಿಯರಾದ ಜೀವಿಜಯ ಅವರು ಕಳೆದ ಚುನಾವಣೆಯಲ್ಲಿ ಸೋತಾಗ ಜೆಡಿಎಸ್ ಕಚೇರಿಯಲ್ಲಿದ್ದ ತನ್ನ ನಾಮಫಲಕವನ್ನು ತೆಗೆದುಕೊಂಡು ಮನೆಗೆ ಹೋಗಿದ್ದರು. ಕಳೆದ ಎರಡು ಚುನಾವಣೆಯಲ್ಲೂ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಅವರನ್ನು ನಂಬಿದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ. ಅವರನ್ನು ನಂಬಿ ಕೆಲಸ ಮಾಡುವದು ಸಾಧ್ಯವಿಲ್ಲದ ಮಾತು. ಈ ಹಿಂದೆ ಜೆಡಿಎಸ್ ನಾಯಕರಾದ ಎಂ.ಸಿ.ನಾಣಯ್ಯ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದೆ ಎಂಬ ಒಂದೇ ಕಾರಣವಿಟ್ಟುಕೊಂಡು ನನ್ನ ಹುದ್ದೆಯನ್ನು ಕಿತ್ತುಕೊಳ್ಳಲಾಯಿತು ಎಂದು ದೂರಿದರು.
ಗೋಷ್ಠಿಯಲ್ಲಿದ್ದ ಯುವ ಜನತಾದಳದ ಜಿಲ್ಲಾಧ್ಯಕ್ಷರಾಗಿದ್ದ ಎನ್.ಆರ್.ಅಜೀಶ್ ಕುಮಾರ್, ಎಸ್‍ಸಿ ಎಸ್‍ಟಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಯೋಗೇಶ್ ಕುಮಾರ್, ತಾಲೂಕು ಅಧ್ಯಕ್ಷರಾಗಿದ್ದ ರಾಮಕೃಷ್ಣ, ಜಿಪಂ ಮಾಜಿ ಸದಸ್ಯೆ ಎನ್.ಎಸ್.ಗೀತಾ ಅವರುಗಳೂ ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವದಾಗಿ ಹೇಳಿದರು.